ಮೊರೊಕ್ಕೊ | ಪ್ರವಾಹ, ಭೂಕುಸಿತದಿಂದ 11 ಮಂದಿ ಮೃತ್ಯು

indiatoday |ಸಾಂದರ್ಭಿಕ ಚಿತ್ರ
ರಬತ್ : ಮೊರೊಕ್ಕೋದ ದಕ್ಷಿಣ ಪ್ರದೇಶದಲ್ಲಿ ಅಸಾಧಾರಣ ಹವಾಮಾನ ವಿದ್ಯಮಾನದಿಂದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು ಕನಿಷ್ಟ 11 ಮಂದಿ ಮೃತಪಟ್ಟಿದ್ದಾರೆ. ಇತರ 9 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ದೇಶದ 17 ಪ್ರಾಂತಗಳಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಿದ್ದು ಪ್ರಾಥಮಿಕ ಮಾಹಿತಿಯಂತೆ 11 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ವಿದೇಶಿ ಪ್ರಜೆ ಎಂಬುದು ದೃಢಪಟ್ಟಿದೆ.
ಈ ಪ್ರಾಂತಗಳಲ್ಲಿ ಎರಡು ದಿನ ಸುರಿದ ಮಳೆಯ ಪ್ರಮಾಣ ಸಾಮಾನ್ಯ ಸಂದರ್ಭದಲ್ಲಿ ವರ್ಷವಿಡೀ ಸುರಿಯುವ ಮಳೆಯ ಪ್ರಮಾಣವನ್ನೂ ಮೀರಿದೆ. 40 ಮನೆಗಳು ಕುಸಿದಿದ್ದು 93 ರಸ್ತೆಗಳಿಗೆ ಹಾನಿಯಾಗಿದೆ. ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು ಮತ್ತು ಟೆಲಿಫೋನ್ ನೆಟ್ವರ್ಕ್ ಮೇಲೆ ಪರಿಣಾಮ ಬೀರಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ರಚಿದ್ ಖಲ್ಪಿ ಹೇಳಿದ್ದಾರೆ.
ಕ್ವರ್ಜಝೇಟ್ ಪ್ರಾಂತದಲ್ಲಿ 3 ಗಂಟೆಗಳಲ್ಲಿ 47 ಮಿ.ಮೀ ಮಳೆಯಾಗಿದ್ದರೆ ಅಲ್ಜೀರಿಯಾ ಗಡಿಯ ಸನಿಹದಲ್ಲಿರುವ ತಗೌನೈಟ್ ಪ್ರಾಂತದಲ್ಲಿ 170 ಮಿ.ಮೀ ಮಳೆ ಸುರಿದಿದ್ದು ಇದು ಕಳೆದ 10 ವರ್ಷಗಳಲ್ಲೇ ದಾಖಲೆ ಮಳೆಯಾಗಿದೆ. ಭಾರೀ ಮಳೆಯಾಗಿರುವ ಕೆಲವು ಪ್ರಾಂತಗಳು ಕಳೆದ 6 ವರ್ಷದಿಂದ ಬರಗಾಲದ ಹೊಡೆತಕ್ಕೆ ಸಿಲುಕಿದ್ದವು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.





