ಹಿಜ್ಬುಲ್ಲಾ ವರಿಷ್ಠನಾಗಿ ನಯೀಮ್ ಖಾಸೀಮ್ ನೇಮಕ

ನಯೀಮ್ ಖಾಸೀಮ್ | PC : PTI
ಬೈರೂತ್ : ಲೆಬನಾನ್ನಲ್ಲಿ ಇಸ್ರೇಲ್ ಆಕ್ರಮಣದ ವಿರುದ್ಧ ಹೋರಾಡುತ್ತಿರುವ ಹಿಜ್ಬುಲ್ಲಾ ಹೋರಾಟಗಾರ ಸಂಘಟನೆಯ ನಾಯಕನಾಗಿ ನಯೀಮ್ ಖಾಸೀಮ್ ಅವರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಹಿಜ್ಬುಲ್ಲಾ ಮಂಗಳವಾರ ಹೇಳಿಕೆಯೊಂದನ್ನು ನೀಡಿದ್ದು, ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾಗಿ ನಯೀಮ್ ಖಾಸೀಮ್ ಅವರನ್ನು ನೇಮಿಸಲಾಗಿದೆಯೆಂದು ತಿಳಿಸಿದೆ. ನಯೀಮ್ ಅವರು ಹಿಜ್ಪುಲ್ಲಾ ಗುಂಪಿನ ಉಪಮುಖ್ಯಸ್ಥರಾಗಿದ್ದರು.
ಅವರು ಹಿಜ್ಬುಲ್ಲಾ ಸಂಘಟನೆಯಲ್ಲಿ ನಯೀಮ್ ಖಾಸೀಮ್ ನಸ್ರಲ್ಲಾ ಅವರರೊಂದಿಗೆ ದೀರ್ಘಕಾಲ ಕಾರ್ಯನಿರ್ವಹಿಸಿದ್ದರು. ಲೆಬನಾನ್ ಮೇಲೆ ನಡೆದ ಇಸ್ರೇಲ್ ದಾಳಿಯಲ್ಲಿ ನಸ್ರಲ್ಲಾ ಮೃತಪಟ್ಟ ಬಳಿಕ ಸಂಘಟನೆಯ ಪ್ರಭಾರ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ್ದರು.
ಶೇಖ್ ನಯೀಮ್ ಖಾಸೀಮ್ ಅವರನ್ನು ಹಿಜ್ಬುಲ್ಲಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆಯೆಂದು ಸಂಘಟನೆಯು ಹೇಳಿಕೆ ತಿಳಿಸಿದೆ. ನಸ್ರಲ್ಲಾ ಅವರು ಇಸ್ರೇಲ್ ದಾಳಿಗೆ ಬಲಿಯಾದ ಸುಮಾರು ಒಂದು ತಿಂಗಳ ಬಳಿಕ ಅವರ ಉತ್ತರಾಧಿಕಾರಿಯ ನೇಮಕವಾಗಿದೆ.
ಇಸ್ರೇಲ್ ವಿರುದ್ಧ ಗೆಲುವು ಸಾಧಿಸುವ ತನಕ ನಸ್ರಲ್ಲಾ ಅವರ ನೀತಿಗಳನ್ನು ತಾನು ಮುಂದುವರಿಸುವುದಾಗಿ ಹಿಜ್ಬುಲ್ಲಾ ಶಪಥಗೈದಿದೆ.





