ಯಾವುದೇ ದೇಶವು ಇತರರ ಮೇಲೆ ದಬ್ಬಾಳಿಕೆ ಮಾಡಬಾರದು: ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದ `ಕ್ವಾಡ್'
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಜಪಾನ್ನ ವಿದೇಶಾಂಗ ಸಚಿವೆ ಯೊಕೊ ಕಮಿಕವ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ (PC : PTI)
ಟೋಕಿಯೊ: ಮುಕ್ತ ಮತ್ತು ಸ್ವತಂತ್ರ ಇಂಡೊ-ಪೆಸಿಫಿಕ್ಗೆ ತನ್ನ ದೃಢವಾದ ಬದ್ಧತೆಯನ್ನು ಸೋಮವಾರ ಪುನರುಚ್ಚರಿಸಿರುವ `ಕ್ವಾಡ್', ಯಾವುದೇ ದೇಶವು ಇತರರ ಮೇಲೆ ಪ್ರಾಬಲ್ಯ ಸಾಧಿಸದ ಮತ್ತು ಪ್ರತಿಯೊಂದು ದೇಶವೂ ಎಲ್ಲಾ ರೀತಿಯ ದಬ್ಬಾಳಿಕೆಯಿಂದ ಮುಕ್ತವಾಗಿರುವ ಪ್ರದೇಶದ ಕಡೆಗೆ ತನ್ನ ಕಾರ್ಯ ಮಾಡುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ಚೀನಾಕ್ಕೆ ಬಲವಾದ ಮತ್ತು ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಸ್ವತಂತ್ರ ಮತ್ತು ಮುಕ್ತ, ನಿಯಮಾಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯಲು ಮತ್ತು ದೇಶಗಳ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮೌಲ್ಯಗಳು, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ಜಪಾನ್ನ ಟೋಕಿಯೋದಲ್ಲಿ ನಡೆದ `ಕ್ವಾಡ್' ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಕರೆ ನೀಡಲಾಗಿದೆ. ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಪರಿಸ್ಥಿತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ `ಕ್ವಾಡ್'ನ ನಾಲ್ವರು ವಿದೇಶಾಂಗ ಸಚಿವರು, ಬಲಪ್ರಯೋಗ ಅಥವಾ ದಬ್ಬಾಳಿಕೆಯ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸುವ ಉದ್ದೇಶದ ಯಾವುದೇ ಏಕಪಕ್ಷೀಯ ಪ್ರಯತ್ನಕ್ಕೆ ಬಲವಾದ ವಿರೋಧವನ್ನು ಸಭೆ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಜಪಾನ್ನ ವಿದೇಶಾಂಗ ಸಚಿವೆ ಯೊಕೊ ಕಮಿಕವ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಸಭೆಯಲ್ಲಿ ಪಾಲ್ಗೊಂಡಿದ್ದರು.
`ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುವಲ್ಲಿ, ಯಾವುದೇ ದೇಶದ ಪ್ರಾಬಲ್ಯವಿಲ್ಲದ ಮತ್ತು ಯಾವುದೇ ದೇಶವು ದಬ್ಬಾಳಿಕೆಗೆ ಒಳಗಾಗದ ವಲಯವನ್ನು ರೂಪಿಸುವಲ್ಲಿ ಪ್ರತಿಯೊಂದು ದೇಶದ ಪಾತ್ರವೂ ಇದೆ. ದಬ್ಬಾಳಿಕೆಗೆ ಒಳಗಾಗದೆ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸುವ ಹಕ್ಕು ಎಲ್ಲಾ ದೇಶಗಳಿಗೂ ಇದೆ' ಎಂದು ಸಭೆಯ ಬಳಿಕ ಸಚಿವರು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಕರಾವಳಿ ರಕ್ಷಣಾ ಪಡೆ ಮತ್ತು ಸಮರನೌಕೆಗಳನ್ನು ಅಪಾಯಕಾರಿ ರೀತಿಯಲ್ಲಿ ಬಳಸುವುದು, ವಿವಿಧ ರೀತಿಯ ಅಪಾಯಕಾರಿ ತಂತ್ರಗಳ ಬಳಕೆ ಹೆಚ್ಚುತ್ತಿರುವುದು, ಇತರ ದೇಶಗಳ ಕಡಲಾಚೆಯ ಸಂಪನ್ಮೂಲಗಳ ದುರ್ಲಾಭ ಪಡೆಯುವ ಚಟುವಟಿಕೆಗಳ ಬಗ್ಗೆ `ಕ್ವಾಡ್' ತೀವ್ರ ಕಳವಳ ವ್ಯಕ್ತಪಡಿಸಿದೆ. ದಕ್ಷಿಣ ಚೀನಾ ಮತ್ತು ಪೂರ್ವ ಚೀನಾ ಸಮುದ್ರ ಸೇರಿದಂತೆ ಜಾಗತಿಕ ಕಡಲ ನಿಯಮಗಳ ಆಧಾರಿತ ವ್ಯವಸ್ಥೆಗೆ ಎದುರಾಗುವ ಸವಾಲುಗಳನ್ನು ಪರಿಹರಿಸಲು ಅಂತರಾಷ್ಟ್ರೀಯ ಕಾನೂನು, ವಿಶೇಷವಾಗಿ ಸಮುದ್ರ ಕಾನೂನಿನ ಮೇಲಿನ ವಿಶ್ವಸಂಸ್ಥೆಯ ನಿರ್ಣಯಕ್ಕೆ ಬದ್ಧವಾಗಿರುವ ಪ್ರಾಮುಖ್ಯತೆಯನ್ನು ಕ್ವಾಡ್ ಒತ್ತಿಹೇಳಿದೆ.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಸಚಿವರು ಬಲವಾಗಿ ಖಂಡಿಸಿದ್ದು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶವನ್ನು ಭಯೋತ್ಪಾದನೆಯ ಉದ್ದೇಶಕ್ಕಾಗಿ ಬಳಸುವುದನ್ನು ತಡೆಯಲು ಎಲ್ಲಾ ದೇಶಗಳೂ ತಕ್ಷಣದ, ನಿರಂತರ ಮತ್ತು ದೃಢ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.