ಪನ್ನೂನ್ ಹತ್ಯೆ ಯತ್ನ ಪ್ರಕರಣದಲ್ಲಿ ಭಾರತದ ಉತ್ತರದಾಯಿತ್ವ ನಿರೀಕ್ಷಿಸುತ್ತಿದ್ದೇವೆ :ಅಮೆರಿಕ
ಗುರುಪತ್ವಂತ್ ಸಿಂಗ್ ಪನ್ನೂನ್ | Photo: PTI
ಹೊಸದಿಲ್ಲಿ : ಕಳೆದ ವರ್ಷದ ಬೇಸಗೆಯಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ಅವರ ವಿಫಲ ಹತ್ಯೆ ಯತ್ನದಲ್ಲಿ ಭಾರತ ಸರಕಾರದ ಅಧಿಕಾರಿಯೊಬ್ಬರ ಪಾತ್ರವಿರುವ ಬಗ್ಗೆ ತಾನು ಹೊಸದಿಲ್ಲಿಯಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುವುದಾಗಿ ಅಮೆರಿಕ ಗುರುವಾರ ಹೇಳಿದೆ.
‘‘ಕಳೆದ ಬೇಸಿಗೆಯಲ್ಲಿ ಅಮೆರಿಕದ ನೆಲದಲ್ಲಿ ನಡೆದ ವಿಫಲ ಹತ್ಯೆ ಯತ್ನದಲ್ಲಿ ಭಾರತ ಸರಕಾರದ ಉದ್ಯೋಗಿಯೊಬ್ಬರ ಪಾತ್ರವಿದೆಯೆಂಬ ಆರೋಪಗಳಿಗೆ ಸಂಬಂಧಿಸಿ ಭಾರತ ಸರಕಾರದಿಂದ ನಾವು ಉತ್ತರದಾಯಿತ್ವವನ್ನು ನಿರೀಕ್ಷಿಸುವುದನ್ನು ನಾವು ಮುಂದುವರಿಸುತ್ತಿದ್ದೇವೆ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ ಪಟೇಲ್ ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕಳವಳಗಳನ್ನು ಭಾರತ ಸರಕಾರದ ಮುಂದೆ ಪ್ರಸ್ತಾವಿಸುವುದನ್ನು ನಾವು ಮುಂದುವರಿಸಲಿದ್ದೇವೆ ಎಂದವರು ಹೇಳಿದ್ದಾರೆ.
ಈ ಮಧ್ಯೆ ವಿವಾಹ ಸಮಾರಂಭವೊಂದರಲ್ಲಿ ಸಿಖ್ಖ್ ಪ್ರತ್ಯೇಕತಾವಾದಿಯೊಬ್ಬನನ್ನು ಗುರಿಯಿರಿಸಿ ಹತ್ಯೆಗೈಯಲು ಸಂಚು ಹೂಡಿದ್ದ ಐದು ಮಂದಿ ಭಾರತೀಚಯ ಪ್ರಜೆಗಳನ್ನು ತಾನು ಬಂಧಿಸಿದ್ದೇನೆಂಬ ಕೆನಡ ಸರಕಾರದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಪಟೇಲ್ ನಿರಾಕರಿಸಿದ್ದಾರೆ.
ಈ ಸುದ್ದಿಯು ಕೆನಡಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಆ ದೇಶದ ಕಾನೂನು ವ್ಯವಸ್ಥೆಗೆ ಸಂಬಂದಿಸಿ ವಿಷಯಗಳ ಬಗ್ಗೆ ಕೆನಡ ಸರಕಾರವು ಪ್ರತಿಕ್ರಿಯೆ ಬೇಕಾಗಿದೆ ಎಂದು ಅಧಿಕಾರಿ ತಿಳಿಸಿದರು.
ಕಳೆದ ವರ್ಷದ ನವೆಂಬರ್ನಲ್ಲಿ ಸಿಖ್ಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಮೇಲೆ ನಡೆದ ವಿಫಲ ಹತ್ಯೆ ಯತ್ನದಲ್ಲಿ ಭಾರತೀಯ ಪ್ರಜೆ ನಿಖಿಲ್ಗುಪ್ತಾ ಎಂಬಾನ ಜೊತೆ ಭಾರತ ಸರಕಾರದ ಅಧಿಕಾರಿಯೊಬ್ಬರು ಶಾಮೀಲಾಗಿದ್ದರು ಎಂದು ಅಮೆರಿಕದ ಫೆಡರಲ್ ವಿಚಾರಣಾಧಿಕಾರಿಗಳು ಆಪಾದಿಸಿದ್ದರು. ಖಾಲಿಸ್ತಾನ್ ಬೆಂಬಲಿಗನಾದ ಗುರುಪತ್ವಂತ್ಸಿಂಗ್ ಅಮೆರಿಕ ಹಾಗೂ ಕೆನಡ ಪೌರತ್ವಗಳೆರಡನ್ನೂ ಹೊಂದಿದ್ದು, ಆತ ನ್ಯೂಯಾರ್ಕ್ನಲ್ಲಿ ನೆಲೆಸಿದ್ದಾನೆ.
ಕಳೆದ ವರ್ಷದ ಜೂನ್ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿತನಾದ ಗುಪ್ತಾನನ್ನು ಜೂನ್ 14ರಂದು ಅಮೆರಿಕಕ್ಕೆ ಗಡಿಪಾರು ಮಾಡಲಾಗಿತ್ತು.