ಬಾಂಗ್ಲಾ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ : ಇಬ್ಬರು ಮೃತ್ಯು
PC : NDTV
ಢಾಕಾ : ಮೂರು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಬಾಂಗ್ಲಾದೇಶದಲ್ಲಿ ಮತ್ತೆ ಪ್ರತಿಭಟನೆ, ಘರ್ಷಣೆ ಭುಗಿಲೆದ್ದಿದೆ. ಕಳೆದ ತಿಂಗಳು ನಡೆದಿದ್ದ ಹಿಂಸಾಚಾರದ ಹೊಣೆಹೊತ್ತು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭ ಇಬ್ಬರು ಸಾವನ್ನಪ್ಪಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಶುಕ್ರವಾರ ಢಾಕಾ ಹಾಗೂ ಇತರ ಕೆಲವು ಪ್ರಮುಖ ನಗರಗಳಲ್ಲಿ 2000ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಗುಂಪಿನಲ್ಲಿದ್ದವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದಾಗ ಇಬ್ಬರು ಸಾವನ್ನಪ್ಪಿದ್ದು 100ಕ್ಕೂ ಅಧಿಕ ಜನರು ಗಾಯಗೊಂಡರು.
ಪೊಲೀಸರ ಕ್ರಮವನ್ನು ಖಂಡಿಸಿದ ವಿದ್ಯಾರ್ಥಿ ಮುಖಂಡರು ಶನಿವಾರ ಪ್ರಧಾನಿ ಶೇಖ್ ಹಸೀನಾ ಜತೆ ನಿಗದಿಯಾಗಿದ್ದ ಸಭೆಯನ್ನು ಬಹಿಷ್ಕರಿಸಿದರಲ್ಲದೆ, ಪ್ರಧಾನಿಯ ರಾಜೀನಾಮೆಗೆ ಆಗ್ರಹಿಸಿದರು ಮತ್ತು ಶನಿವಾರದಿಂದ ಅಸಹಕಾರ ಚಳವಳಿಗೆ ಕರೆ ನೀಡಿದ್ದಾರೆ.