ಫೆಲೆಸ್ತೀನ್ ಕೈದಿಗಳಿಗೆ ಇಸ್ರೇಲ್ನಲ್ಲಿ ಚಿತ್ರಹಿಂಸೆ : ಮಾನವ ಹಕ್ಕುಗಳ ಗುಂಪು ಖಂಡನೆ
PC:freepik
ಜೆರುಸಲೇಂ : ಗಾಝಾದಲ್ಲಿ ಯುದ್ಧ ಆರಂಭಗೊಂಡಂದಿನಿಂದ ಫೆಲೆಸ್ತೀನ್ ಕೈದಿಗಳನ್ನು ನಿಂದಿಸುವ ಮತ್ತು ಚಿತ್ರಹಿಂಸೆ ನೀಡುವ ವ್ಯವಸ್ಥಿತ ನೀತಿಯನ್ನು ಇಸ್ರೇಲ್ ಮುಂದುವರಿಸುತ್ತಾ ಬಂದಿದೆ ಎಂದು ಇಸ್ರೇಲ್ನ ಮಾನವ ಹಕ್ಕುಗಳ ಗುಂಪು ಹೇಳಿದೆ.
ಫೆಲೆಸ್ತೀನ್ ಕೈದಿಗಳ ವಿರುದ್ಧ ಅನಿಯಂತ್ರಿತ ಹಿಂಸಾಚಾರ, ಲೈಂಗಿಕ ನಿಂದನೆ ಎಸಗಲಾಗಿದೆ. ಅಕ್ಟೋಬರ್ 7ರ ಗಾಝಾ ದಾಳಿಯ ಬಳಿಕ ಇಸ್ರೇಲ್ ಜೈಲಿನಲ್ಲಿ ಬಂಧನದಲ್ಲಿದ್ದ 55 ಫೆಲೆಸ್ತೀನ್ ಕೈದಿಗಳ ಸಂದರ್ಶನವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಇವರಲ್ಲಿ ಹೆಚ್ಚಿನವರನ್ನು ಯಾವುದೇ ವಿಚಾರಣೆ ನಡೆಸದೆ ಜೈಲಿನಲ್ಲಿರಿಸಲಾಗಿದೆ. ಇಸ್ರೇಲ್ನಲ್ಲಿ ಬಂಧನದಲ್ಲಿರುವ ಎಲ್ಲಾ ಫೆಲೆಸ್ತೀನ್ ಕೈದಿಗಳ ನಿರಂತರ ನಿಂದನೆ ಮತ್ತು ಚಿತ್ರಹಿಂಸೆಯ ಮೇಲೆ ಕೇಂದ್ರೀಕರಿಸಿದ ವ್ಯವಸ್ಥಿತ, ಸಾಂಸ್ಥಿಕ ನೀತಿಯನ್ನು ಸಾಕ್ಷ್ಯಗಳು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಇಸ್ರೇಲ್ನ ಮಾನವ ಹಕ್ಕುಗಳ ಗುಂಪು ಬಿ'ಟ್ಸೆಲಮ್ ವರದಿ ಮಾಡಿದೆ.
ನೆಗೆವ್ ಮರುಭೂಮಿಯ ಮಿಲಿಟರಿ ನೆಲೆಯಲ್ಲಿ ಇಸ್ರೇಲ್ ಯೋಧರು 9 ಕೈದಿಗಳಿಗೆ ತೀವ್ರ ಚಿತ್ರಹಿಂಸೆ ನೀಡಿದ ಆರೋಪ ಕೇಳಿ ಬಂದ ಕೆಲ ದಿನಗಳ ಬಳಿಕ ವರದಿ ಬಿಡುಗಡೆಯಾಗಿದೆ. ಇಸ್ರೇಲ್ ಬಂದೀಖಾನೆ ಇಲಾಖೆ ವರದಿಯನ್ನು ತಳ್ಳಿಹಾಕಿದ್ದು ಎಲ್ಲಾ ಕೈದಿಗಳನ್ನೂ ಕಾನೂನಿನ ಪ್ರಕಾರ ನಡೆಸಿಕೊಳ್ಳಲಾಗುತ್ತಿದೆ ಮತ್ತು ವೃತ್ತಿಪರ ತರಬೇತಿ ಪಡೆದ ಸಿಬಂದಿಗಳಿಂದ ಎಲ್ಲಾ ಮೂಲಭೂತ ಹಕ್ಕುಗಳನ್ನು ಒದಗಿಸಲಾಗುತ್ತಿದೆ ಎಂದಿದೆ.
ಫೆಲೆಸ್ತೀನ್ ಕೈದಿಗಳನ್ನು ಮನಬಂದಂತೆ ಥಳಿಸಲಾಗುತ್ತಿದೆ ಮತ್ತು ಅವಮಾನಕರವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿದ್ರಾಹೀನತೆ, ನಿರಂತರ ಲೈಂಗಿಕ ಹಿಂಸೆಗೆ ಒಳಪಡಿಸಲಾಗುತ್ತಿದೆ. ಒಟ್ಟು ಮಾಹಿತಿಯ ಪ್ರಕಾರ, ಸರಕಾರದ ಆದೇಶಗಳಡಿ ನಿಂದನೆ ಮತ್ತು ಚಿತ್ರಹಿಂಸೆ ನಡೆಯುತ್ತಿದೆ ಮತ್ತು ದೇಶೀಯ ಮತ್ತು ಅಂತರಾಷ್ಟ್ರೀಯ ಕಾನೂನಿನಡಿಯ ಕಟ್ಟುಪಾಡುಗಳ ಉಲ್ಲಂಘನೆ ನಿರಂತರವಾಗಿದೆ. ಆಕ್ರಮಿತ ಪಶ್ಚಿಮದಂಡೆ ಮತ್ತು ಇತರ ಪ್ರದೇಶಗಳಲ್ಲಿ ಇಸ್ರೇಲ್ನಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಾಖಲೀಕರಿಸಲಾಗಿದೆ. ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇತಮರ್ ಬೆನ್-ಗ್ವಿವರ್ ಅವರ ನಿರ್ದೇಶನದಡಿ ಕೈದಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಪುರಾವೆಗಳಿವೆ ಎಂದು ವರದಿ ಹೇಳಿದೆ.