ಇಸ್ರೇಲ್ನಿಂದ `ಸಾಮೂಹಿಕ ಹತ್ಯೆ': ಇರಾನ್ ಆರೋಪ
ಸಂಘರ್ಷ ಉಲ್ಬಣಿಸುವ ಪ್ರಯತ್ನಕ್ಕೆ ವಿರೋಧ : ಈಜಿಪ್ಟ್
ಲೆಬನಾನ್ ಸೈನಿಕರು ಮತ್ತು ಅಗ್ನಿಶಾಮಕ ದಳದವರು ಮೊಬೈಲ್ ಅಂಗಡಿಯೊಳಗೆ ವಾಕಿ-ಟಾಕಿ ಸ್ಫೋಟಗೊಂಡ ನಂತರ ಅದರ ಹೊರಗೆ ಜಮಾಯಿಸಿದ ಚಿತ್ರ PC : PTI
ಟೆಹ್ರಾನ್: ಲೆಬನಾನ್ ನಲ್ಲಿ ನಡೆದ ಸರಣಿ ಪೇಜರ್ ಸ್ಫೋಟವನ್ನು ಇರಾನ್ ಖಂಡಿಸಿದ್ದು ಯಹೂದಿ ಆಡಳಿತ ಭಯೋತ್ಪಾದಕ ಕೃತ್ಯವು ಸಾಮೂಹಿಕ ಹತ್ಯೆಗೆ ನಿದರ್ಶನವಾಗಿದೆ ಎಂದಿದೆ.
ಇಸ್ರೇಲಿ ಆಡಳಿತದ ಭಯೋತ್ಪಾದಕ ಕೃತ್ಯಗಳು ಮತ್ತು ಅವುಗಳಿಂದ ಉದ್ಭವಿಸುವ ಬೆದರಿಕೆಗಳನ್ನು ಎದುರಿಸುವುದು ತುರ್ತು ಅಗತ್ಯವಾಗಿದೆ. ಇಸ್ರೇಲ್ನ ಕ್ರಿಮಿನಲ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ಅಂತರಾಷ್ಟ್ರೀಯ ಸಮುದಾಯ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಇರಾನ್ ವಿದೇಶಾಂಗ ಇಲಾಖೆ ವಕ್ತಾರ ನಾಸೆರ್ ಕನಾನಿ ಹೇಳಿದ್ದಾರೆ.
ಸ್ಫೋಟದಲ್ಲಿ ಲೆಬನಾನ್ಗೆ ಇರಾನ್ ನ ರಾಯಭಾರಿ ಮೊಜ್ತಬಾ ಅಮಾನಿಯ ಮುಖ ಹಾಗೂ ಕೈಗೆ ಗಾಯವಾಗಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲು ಲೆಬನಾನ್ಗೆ ರಕ್ಷಣಾ ತಂಡ ಹಾಗೂ ನೇತ್ರ ವೈದ್ಯರನ್ನು ರವಾನಿಸಿರುವುದಾಗಿ ಇರಾನ್ ನ ರೆಡ್ಕ್ರೆಸೆಂಟ್ ಬುಧವಾರ ಹೇಳಿದೆ.
ಸಂಘರ್ಷ ಉಲ್ಬಣಿಸುವ ಪ್ರಯತ್ನಕ್ಕೆ ವಿರೋಧ : ಈಜಿಪ್ಟ್
ಲೆಬನಾನ್ ನಲ್ಲಿ ಮಂಗಳವಾರ ನಡೆದ ಪೇಜರ್ ಸ್ಫೋಟವನ್ನು ಖಂಡಿಸಿರುವ ಈಜಿಪ್ಟ್, ಲೆಬನಾನ್ ಅನ್ನು ಬೆಂಬಲಿಸುವುದಾಗಿ ಘೋಷಿಸಿದೆ. ವಲಯದಲ್ಲಿ ಸಂಘರ್ಷನ್ನು ಉಲ್ಬಣಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವುದಾಗಿ ಬುಧವಾರ ಹೇಳಿದೆ.
ಈಜಿಪ್ಟ್ ಗೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಜತೆಗೆ ನಡೆಸಿದ ಮಾತುಕತೆಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಎಲ್-ಸಿಸಿ ಸಂಘರ್ಷ ಉಲ್ಬಣಿಸುವ ಪ್ರಯತ್ನಗಳಿಗೆ ಈಜಿಪ್ಟ್ನ ವಿರೋಧವನ್ನು ದೃಢಪಡಿಸಿದರು ಮತ್ತು ಎಲ್ಲಾ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಆಗ್ರಹಿಸಿದರು. ಹಾಗೂ ಲೆಬನಾನ್ಗೆ ಬೆಂಬಲವನ್ನು ಪುನರುಚ್ಚರಿಸಿದರು ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.