2025ರ ಸಾಲಿನ ವೈದ್ಯಕೀಯ ನೋಬೆಲ್ ಪ್ರಶಸ್ತಿ ಪ್ರಕಟ; ಮೂವರು ವಿಜ್ಞಾನಿಗಳು ಆಯ್ಕೆ

ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್ಡೆಲ್ ಮತ್ತು ಶಿಮೊನ್ ಸಕಾಗುಚಿ (Photo credit: X/@NobelPrize)
ಹೊಸದಿಲ್ಲಿ: 2025ರ ಸಾಲಿನ ವೈದ್ಯಕೀಯ ಅಥವಾ ಶರೀರಶಾಸ್ತ್ರ ವಿಭಾಗದ ನೋಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಬಾರಿ ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಮೂವರು ವಿಜ್ಞಾನಿಗಳಿಗೆ ದೇಹದ ರೋಗನಿರೋಧಕ ವ್ಯವಸ್ಥೆ(immune system) ಹೇಗೆ ತನ್ನದೇ ಅಂಗಾಂಗಗಳ ಮೇಲೆ ದಾಳಿ ಮಾಡದಂತೆ ನಿಯಂತ್ರಿತವಾಗಿರುತ್ತದೆ ಎಂಬುದನ್ನು ಪತ್ತೆ ಹಚ್ಚಿದ ಮಹತ್ವದ ಸಂಶೋಧನೆಗಾಗಿ 2025ರ ಸಾಲಿನ ವೈದ್ಯಕೀಯ ನೋಬೆಲ್ ಪ್ರಶಸ್ತಿ ನೀಡಲಾಗಿದೆ.
ಮೇರಿ ಇ. ಬ್ರಂಕೋವ್ ಅವರು ಅಮೆರಿಕದ ಪ್ರಿಂಸ್ಟನ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ.
ಸಿಯಾಟಲ್ನ ಇನ್ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯಾಲಜಿಯಲ್ಲಿ ಹಿರಿಯ ಕಾರ್ಯಕ್ರಮ ನಿರ್ವಾಹಕಿಯಾಗಿದ್ದಾರೆ.
ಫ್ರೆಡ್ ರಾಮ್ಸ್ಡೆಲ್ ಅವರು 1987ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ನಿಂದ ಪಿಎಚ್ಡಿ ಪಡೆದಿದ್ದಾರೆ. ಈಗ ಸ್ಯಾನ್ ಫ್ರಾನ್ಸಿಸ್ಕೋದ ಸೊನೊಮಾ ಬಯೋಥೆರಪ್ಯೂಟಿಕ್ಸ್ನಲ್ಲಿ ವೈಜ್ಞಾನಿಕ ಸಲಹೆಗಾರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಮೊನ್ ಸಕಾಗುಚಿ1976ರಲ್ಲಿ ತಮ್ಮ ಎಂ.ಡಿ. ಮತ್ತು 1983ರಲ್ಲಿ ಜಪಾನ್ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದರು. ಈಗ ಒಸಾಕಾ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಫ್ರಾಂಟಿಯರ್ ರಿಸರ್ಚ್ ಸೆಂಟರ್ನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.







