ಚೀನಾದ ಆಕ್ಷೇಪ | ಹೇಳಿಕೆಯಿಂದ ತೈವಾನ್ ಹೆಸರು ತೆಗೆದುಹಾಕಿದ ಪೆಸಿಫಿಕ್ ಮುಖಂಡರು
ಸಿಡ್ನಿ: ಶುಕ್ರವಾರ ಟೊಂಗಾ ದೇಶದ ರಾಜಧಾನಿ ನುಕು'ಅಲೋಫಾದಲ್ಲಿ ನಡೆದಿದ್ದ ಪೆಸಿಫಿಕ್ ದ್ವೀಪಗಳ ವೇದಿಕೆಯ ವಾರ್ಷಿಕ ಸಭೆಯ ಬಳಿಕ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಿಂದ ತೈವಾನ್ನ ಹೆಸರನ್ನು ತೆಗೆದು ಹಾಕಲಾಗಿದೆ. ಚೀನಾದ ಆಕ್ಷೇಪದ ಬಳಿಕ ಕೈಗೊಂಡಿರುವ ಈ ಕ್ರಮ `ಅಸಭ್ಯ ಹಸ್ತಕ್ಷೇಪದ' ಪ್ರಕ್ರಿಯೆಯಾಗಿದೆ ಎಂದು ತೈವಾನ್ ಖಂಡಿಸಿದೆ.
18 ದೇಶಗಳ ವೇದಿಕೆಯಲ್ಲಿ ಮೂರು ಸದಸ್ಯ ದೇಶಗಳು ತೈವಾನ್ ಜತೆ ರಾಜತಾಂತ್ರಿಕ ಸಂಬಂಧ ಹೊಂದಿದ್ದರೆ 15 ಸದಸ್ಯ ದೇಶಗಳು ಚೀನಾದ ನಿಲುವನ್ನು (ತೈವಾನ್ಗೆ ಸಂಬಂಧಿಸಿ) ಬೆಂಬಲಿಸುತ್ತವೆ. ಪೆಸಿಫಿಕ್ ದ್ವೀಪರಾಷ್ಟ್ರಗಳ ಮೂಲಸೌಕರ್ಯ ಯೋಜನೆಗೆ ಸಾಲ ನೀಡಿದ ದೇಶಗಳಲ್ಲಿ ಚೀನಾ ಪ್ರಮುಖವಾಗಿದೆ. ತೈವಾನ್ ತನ್ನ ಒಂದು ಪ್ರಾಂತವಾಗಿರುವುದರಿಂದ ಯಾವುದೇ ದೇಶದ ಜತೆ ನೇರ ಸಂಬಂಧ ಸ್ಥಾಪಿಸುವ ಹಕ್ಕನ್ನು ಹೊಂದಿಲ್ಲ ಎಂದು ಚೀನಾ ಪ್ರತಿಪಾದಿಸುತ್ತಿದೆ.
ವೇದಿಕೆಯ ವೆಬ್ಸೈಟ್ನಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದ ` ತೈವಾನ್ ಜತೆಗಿನ ಸಂಬಂಧ' ಎಂಬ ಶೀರ್ಷಿಕೆಯ ಪ್ರಕಟಣೆಯಲ್ಲಿ ` ತೈವಾನ್ ಜತೆಗಿನ ಸಂಬಂಧಗಳ ಕುರಿತು 1992ರ ನಾಯಕರ ನಿರ್ಧಾರವನ್ನು ನಾಯಕರು ಪುನರುಚ್ಚರಿಸಿದರು' ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪ್ರಕಟಣೆಯನ್ನು ಹಿಂದಕ್ಕೆ ಪಡೆದು ಶನಿವಾರ ಪೋಸ್ಟ್ ಮಾಡಿದ ಹೊಸ ಪ್ರಕಟಣೆಯಲ್ಲಿ ತೈವಾನ್ನ ಉಲ್ಲೇಖವನ್ನು ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೈವಾನ್ನ ವಿದೇಶಾಂಗ ಇಲಾಖೆ ` ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳು ಮಾಡುವ ಚೀನಾದ ಅಸಭ್ಯ ಮತ್ತು ಅಸಮಂಜಸ ಹಸ್ತಕ್ಷೇಪ ಖಂಡನೀಯವಾಗಿದೆ. ಚೀನಾದ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಮಾನ ಮನಸ್ಕ ದೇಶಗಳನ್ನು ವಿನಂತಿಸುತ್ತೇವೆ' ಎಂದಿದೆ. ಆದರೂ ಪ್ರಕಟವಾದ ಜಂಟಿ ಹೇಳಿಕೆಯು ತೈವಾನ್ನ ಸ್ಥಾನಮಾನವನ್ನು ದುರ್ಬಲಗೊಳಿಸಲಿಲ್ಲ ಅಥವಾ ಭವಿಷ್ಯದಲ್ಲಿ ಭಾಗವಹಿಸುವುದನ್ನು ತಡೆಯುವುದಿಲ್ಲ' ಎಂದು ತೈವಾನ್ ಹೇಳಿದೆ.
ಪೆಸಿಫಿಕ್ ದೇಶಗಳ ವೇದಿಕೆ ಸಭೆಯಲ್ಲಿ ತೈವಾನ್ನ ಉಪಪ್ರಧಾನಿ ಟಿಯೆನ್ ಚುಂಗ್ಕ್ವಾಂಗ್ ಭಾಗವಹಿಸಿದ್ದರು. `ಸಭೆಯ ಬಳಿಕ ಹೊರಡಿಸಿದ ಪ್ರಕಟಣೆಯಲ್ಲಿ ತೈವಾನ್ನ ಉಲ್ಲೇಖ ತಪ್ಪಾಗಿರಬೇಕು. ವೇದಿಕೆಯೊಂದಿಗೆ ಭುಜವನ್ನು ಉಜ್ಜುವ ಮೂಲಕ ತಮ್ಮ ಉಪಸ್ಥಿತಿಯ ಪ್ರಜ್ಞೆಯನ್ನು ಹೆಚ್ಚಿಸಲು ತೈವಾನ್ ಅಧಿಕಾರಿಗಳು ಮಾಡುವ ಯಾವುದೇ ಪ್ರಯತ್ನವೂ ಸ್ವಯಂ ವಂಚನೆಯಾಗುತ್ತದೆ ಎಂದು' ಪೆಸಿಫಿಕ್ ದ್ವೀಪಗಳಿಗೆ ಚೀನಾದ ವಿಶೇಷ ಪ್ರತಿನಿಧಿ ಕ್ವಿಯಾನ್ ಬೊ ಪ್ರತಿಕ್ರಿಯಿಸಿದ್ದಾರೆ.