ಫೆ.9 ಅನ್ನು ‘ಗಲ್ಫ್ ಆಫ್ ಅಮೆರಿಕ ಡೇ’ ಎಂದು ಘೋಷಿಸಿದ ಟ್ರಂಪ್

ಡೊನಾಲ್ಡ್ ಟ್ರಂಪ್ | PC:X\ @POTUS
ವಾಷಿಂಗ್ಟನ್: ಮೆಕ್ಸಿಕೊ ಕೊಲ್ಲಿಯ ಮರುನಾಮಕರಣಕ್ಕಾಗಿ ಇತ್ತೀಚಿಗೆ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ.9ನ್ನು ಮೊದಲ ‘ಗಲ್ಫ್ ಆಫ್ ಅಮೆರಿಕ ಡೇ(ಅಮೆರಿಕ ಕೊಲ್ಲಿ ದಿನ)’ ಎಂಬ ಘೋಷಣೆಗೆ ರವಿವಾರ ಸಹಿ ಹಾಕಿದ್ದಾರೆ.
ಸೂಪರ್ಬೌಲ್ನಲ್ಲಿ ಭಾಗವಹಿಸಲು ಏರ್ಫೋರ್ಸ್ ಒನ್ ವಿಮಾನದಲ್ಲಿ ನ್ಯೂ ಒರ್ಲಿಯನ್ಸ್ಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಟ್ರಂಪ್ ಈ ಘೋಷಣೆಗೆ ಸಹಿ ಹಾಕಿದರು. ನ್ಯೂ ಒರ್ಲಿಯನ್ಸ್ ಕೊಲ್ಲಿ ಪ್ರದೇಶದಲ್ಲಿದೆ.
‘ನಾವೀಗ ಕೊಲ್ಲಿಯ ಮೇಲೆಯೇ ಹಾರುತ್ತಿದ್ದೇವೆ, ಹೀಗಾಗಿ ಘೋಷಣೆಗೆ ಇದು ಸೂಕ್ತ ಸಮಯವಾಗಿದೆ ’ ಎಂದು ಟ್ರಂಪ್ ಹೇಳಿದರು.
‘ಮರುನಾಮಕರಣದ ಬಳಿಕ ಇದು ಗಲ್ಫ್ ಆಫ್ ಅಮೆರಿಕಕ್ಕೆ ನನ್ನ ಮೊದಲ ಭೇಟಿಯಾಗಿದೆ’ ಎಂದು ಶ್ವೇತಭವನದ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಘೋಷಣೆಯಲ್ಲಿ ಟ್ರಂಪ್ ಹೇಳಿದ್ದಾರೆ.
— President Donald J. Trump (@POTUS) February 9, 2025
ಜ.20ರಂದು ತನ್ನ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದ ಟ್ರಂಪ್ ಹೆಸರು ಬದಲಾವಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಆಂತರಿಕ ಇಲಾಖೆಗೆ 30 ದಿನಗಳ ಕಾಲಾವಕಾಶ ನೀಡಿದ್ದರು.
ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಬೆನ್ನಲ್ಲೇ ಅಮೆರಿಕದ ತಟರಕ್ಷಣಾ ಪಡೆಯು ಗಲ್ಫ್ ಆಫ್ ಅಮೆರಿಕ ಪದಬಳಕೆಯನ್ನು ಆರಂಭಿಸಿತ್ತು. ಇದು ಅಮೆರಿಕ ಸರಕಾರದಿಂದ ಈ ಪದದ ಮೊದಲ ಅಧಿಕೃತ ಬಳಕೆಯಾಗಿದೆ.
‘ನನ್ನ ಆಡಳಿತವು ಅಮೆರಿಕದ ಶ್ರೇಷ್ಠತೆಯ ಇತಿಹಾಸದಲ್ಲಿ ದೇಶದ ಹೆಮ್ಮೆಯನ್ನು ಮರುಸ್ಥಾಪಿಸುತ್ತಿದ್ದು,ನಮ್ಮ ಮಹಾನ್ ರಾಷ್ಟ್ರವು ಒಟ್ಟಾಗಿ ಸೇರಿ ಈ ಮಹತ್ವದ ಸಂದರ್ಭವನ್ನು ಮತ್ತು ಅಮೆರಿಕ ಕೊಲ್ಲಿಯ ಮರುನಾಮಕರಣವನ್ನು ಸ್ಮರಿಸುವುದು ಸೂಕ್ತವಾಗಿದೆ ’ ಎಂದು ಟ್ರಂಪ್ ಘೋಷಣೆಯಲ್ಲಿ ತಿಳಿಸಿದ್ದಾರೆ.
ಅಮೆರಿಕ ಕೊಲ್ಲಿ ದಿನವನ್ನು ಸೂಕ್ತ ಕಾರ್ಯಕ್ರಮಗಳು,ಸಮಾರಂಭಗಳು ಮತ್ತು ಚಟುವಟಿಕೆಗಳೊಂದಿಗೆ ಆಚರಿಸುವಂತೆ ಟ್ರಂಪ್ ಸರಕಾರಿ ಅಧಿಕಾರಿಗಳು ಮತ್ತು ದೇಶದ ಜನತೆಗೆ ಕರೆ ನೀಡಿದ್ದಾರೆ.







