ಭಾರತ ವಿರೋಧಿ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಮಾದಕ ವಸ್ತು ಜಾಲ ಬೇಧಿಸಿದ ಕೆನಡಾ

PC | timesofindia
ಹೊಸದಿಲ್ಲಿ: ಖಲಿಸ್ತಾನಿ ಸಂಘಟನೆಯ ಭಾರತ ವಿರೋಧಿ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಭೇದಿಸುವಲ್ಲಿ ಕೆನಡಾದ ಪೀಲ್ ಪ್ರಾದೇಶಿಕ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಾಜೆಕ್ಟ್ ಪೆಲಿಕಾನ್ ಹೆಸರಿನ ಬೃಹತ್ ಕಾರ್ಯಾಚರಣೆಯಲ್ಲಿ ದಾಖಲೆ ಪ್ರಮಾಣದ ಅಂದರೆ 47.9 ದಶಲಕ್ಷ ಡಾಲರ್ ಮೌಲ್ಯದ 479 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಕೆನಡಾದಲ್ಲಿ ನೆಲೆಗೊಂಡಿರುವ ಭಾರತ ಮೂಲದ ಏಳು ಮಂದಿ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಅಮೆರಿಕದಿಂದ ಕೆನಡಾಗೆ ಇರುವ ವಾಣಿಜ್ಯ ಚಾರಣ ಮಾರ್ಗದ ಲಾಭ ಪಡೆದು ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನುವ ಅಂಶ ತನಿಖೆಯಿಂದ ದೃಢಪಟ್ಟಿದೆ. ಮೆಕ್ಸಿಕೊ ಕಾರ್ಟೆಲ್ ಬಳಸಿಕೊಂಡು, ಅಮೆರಿಕದ ವಿತರಕರ ಮೂಲಕ ಕಾರ್ಯನಿರ್ವಹಿಸುತ್ತಿತ್ತು ಎಂದು ಪೀಲ್ ಪೊಲೀಸರು ಹೇಳಿದ್ದಾರೆ.
ಮಾದಕ ವಸ್ತು ಕಳ್ಳಸಾಗಾಣೆಯಿಂದ ಬಂದ ಲಾಭವನ್ನು ಪ್ರತಿಭಟನೆಗಳು ಮತ್ತು ಜನಮತ ಗಣನೆ, ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ. ಅತ್ಯಧಿಕ ಮೌಲ್ಯದ ಮಕ್ಸಿಕನ್ ಕೊಕೇನ್ಗಳ ಕಳ್ಳಸಾಗಾಣಿಕೆಗೆ ಐಎಸ್ಐ ಬೆಂಬಲಿತ ಖಲಿಸ್ತಾನಿ ಗುಂಪುಗಳು ಕೆನಡಾದಲ್ಲಿ ನೆರವು ನೀಡುತ್ತಿದ್ದವು ಎಂದು ಗುಪ್ತಚರ ಮೂಲಗಳು ಹೇಳಿವೆ. ಐಎಸ್ಐ ಅಫ್ಘಾನ್ನಲ್ಲಿ ಉತ್ಪಾದಿಸಿದ ಹೆರಾಯಿನ್ ಮಾರಾಟ ಮಾಡುತ್ತಿತ್ತು ಎನ್ನಲಾಗಿದೆ.
ಬಂಧಿತರದಲ್ಲಿ ಟೊರಂಟೊ ನಿವಾಸಿ ಯೋಗೇಂದ್ರಝಾ (31), ಬ್ರಂಪ್ಟನ್ ನಿವಾಸಿ ಮನ್ಪ್ರೀತ್ ಸಿಂಗ್ (44), ಹ್ಯಾಮಿಲ್ಟನ್ನ ಫಿಲಿಪ್ ಟೆಪ್ (39), ಬ್ರಂಪ್ಟನ್ನ ಅರವಿಂದರ್ ಪವಾರ್ (29), ಕಲೇಡಾನ್ನ ಕರಮ್ಜೀತ್ ಸಿಂಗ್ (36) ಮತ್ತು ಗುರುತೇಜ್ ಸಿಂಗ್ (36), ಕ್ಯಾಂಬ್ರಿಡ್ಜ್ನ ಸರ್ತಾಜ್ ಸಿಂಗ್ (27), ಜಾರ್ಜ್ಟೌನ್ನ ಶಿವ ಓಂಕಾರ್ ಸಿಂಗ್ (31) ಸೇರಿದ್ದಾರೆ. ಇವರ ಜೊತೆಗೆ ಮಿಸಾಗುವಾದ ಟಾಮಿ ಹ್ಯೂನ್ ಎಂಬಾತನನ್ನು ಬಂಧಿಸಲಾಗಿದೆ.







