ಗಾಝಾ ಸಂಘರ್ಷದ ಬಳಿಕ ಬ್ರಿಟನ್ನಲ್ಲಿ ದ್ವೇಷಪರಾಧ ಪ್ರಕರಣಗಳಲ್ಲಿ ದಾಖಲೆಯ ಏರಿಕೆ : ಬ್ರಿಟೀಷ್ ಗೃಹ ಸಚಿವಾಲಯದ ವರದಿ

PC :create.vista
ಲಂಡನ್ : ಗಾಝಾದಲ್ಲಿ ಇಸ್ರೇಲ್-ಹಮಾಸ್ ಹೋರಾಟಗಾರರ ನಡುವೆ ಯುದ್ಧ ಆರಂಭಗೊಂಡ ಬಳಿಕ ಕಳೆದ ಒಂದು ವರ್ಷದಲ್ಲಿ ಬ್ರಿಟನ್ ಹಾಗೂ ವೇಲ್ಸ್ನಲ್ಲಿ ಧಾರ್ಮಿಕ ದ್ವೇಷಪರಾಧದ ಪ್ರಕರಣಗಳ ಸಂಖ್ಯೆಯು ದಾಖಲೆಯ ಶೇ.25ರಷ್ಟು ಏರಿಕೆಯನ್ನು ಕಂಡಿದೆ ಎಂದು ಬ್ರಿಟೀಷ್ ಗೃಹ ಸಚಿವಾಲಯದ ವರದಿಯೊಂದು ತಿಳಿಸಿದೆ.
ವ್ಯಕ್ತಿಯ ಜನಾಂಗೀಯತೆ, ಪಂಗಡ, ಧರ್ಮ, ಲೈಂಗಿಕ ಪ್ರವೃತ್ತಿ, ಅಥವಾ ಲಿಂಗಾಂತರಿಗಳ ಗುರುತಿನ ಆಧಾರದಲ್ಲಿ 1,40,561 ದ್ವೇಷಪರಾಧ ಪ್ರಕರಣಗಳು ದಾಖಲಾಗಿವೆ ಈ ವರ್ಷದ ಮಾರ್ಚ್ವರೆಗಿನ 12 ತಿಂಗಳುಗಳಲ್ಲಿ ಪೊಲೀಸರು ಈ ಪ್ರಕರಣಗಳನ್ನು ದಾಖಲಿಸಿದ್ದರು.
ಇವುಗಳಲ್ಲಿ 98,7999 (ಶೇ.70) ಪ್ರಕರಣಗಳು ಜನಾಂಗೀಯದ್ವೇಷದಿಂದ ಪ್ರೇರಿತವಾಗಿರುವುದಾಗಿ ವರದಿಗಳು ಹೇಳಿವೆ. ಧಾರ್ಮಿಕ ದ್ವೇಷ ಅಪರಾಧದ ಪ್ರಕರಣಗಳು 2022-23ನೇ ಸಾಲಿನಲ್ಲಿ 8,370ರಷ್ಟಿದ್ದುದು, 2023-24ನೇಸಾಲಿನಲ್ಲಿ 10,500ಕ್ಕೇರಿದೆ. 2012ರಲ್ಲಿ ಈ ಕುರಿತ ದತ್ತಾಂಶ ಸಂಗ್ರಹ ಆರಂಭಗೊಂಡ ಬಳಿಕ ಇದು ಗರಿಷ್ಠ ಸಂಖ್ಯೆಯಾಗಿದೆ.
ಯೆಹೂದಿಗಳ ವಿರುದ್ಧ 3,282ರಷ್ಟು ದ್ವೇಷಪರಾಧಗಳು ನಡೆದಿದ್ದು, ಇದು ಹಿಂದಿನ ಸಾಲಿಗಿಂತ ಎರಡು ಪಟ್ಟು ಅಧಿಕವಾಗಿದೆ. ಮುಸ್ಲಿಮರ ವಿರುದ್ಧ 3,866 ದ್ವೇಷಪರಾಧ ಕೃತ್ಯಗಳು ನಡೆದಿರುವುದಾಗಿ ಬ್ರಿಟನ್ ಗೃಹ ಸಚಿವಾಲಯದ ವರದಿ ತಿಳಿಸಿದೆ.
ಮುಸ್ಲಿಮರು ಹಾಗೂ ಯೆಹೂದಿಗಳ ಮೇಲೆ ಎಸಗಲಾಗುತ್ತಿರುವ ದ್ವೇಷಪರಾಧಗಳು ಕಳವಳಕಾರಿ ಮಟ್ಟವನ್ನು ತಲುಪಿರುವುದು ನಮ್ಮ ಸಮಾಜಕ್ಕೊಂದು ಕಳಂಕವಾಗಿದೆ ಎಂದು ಬ್ರಿಟನ್ ಗೃಹ ಸಚಿವ ಯುವೆಟ್ಟ್ ಕೂಪರ್ ತಿಳಿಸಿದ್ದಾರೆ.







