ಉಕ್ರೇನ್ ಮೇಲೆ ರಷ್ಯಾದ ಹೈಪರ್ಸಾನಿಕ್ ಕ್ಷಿಪಣಿ ದಾಳಿ : ನಾಲ್ವರು ಮೃತ್ಯು

ಸಾಂದರ್ಭಿಕ ಚಿತ್ರ : gemini AI
ಕೀವ್, ಮೇ 24: ಶನಿವಾರ ತಡರಾತ್ರಿ ರಷ್ಯವು ಉಕ್ರೇನ್ ಮೇಲೆ 700 ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆದಿದ್ದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರ 56 ಮಂದಿ ಗಾಯಗೊಂಡಿದ್ದಾರೆ. ಕೀವ್ ನಗರದಲ್ಲಿ ಹಲವು ಕಟ್ಟಡಗಳು, ಶಾಲೆಗಳು ಹಾಗೂ ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಹೈಪರ್ಸಾನಿಕ್ ಒರೆಶ್ನಿಕ್ ಕ್ಷಿಪಣಿಯನ್ನು ರಶ್ಯ ಪ್ರಯೋಗಿಸಿದ್ದು ಭಯಭೀತರಾದ ಜನರು ಮೆಟ್ರೋ ಸ್ಟೇಷನ್ಗಳಲ್ಲಿ ಆಶ್ರಯ ಪಡೆದರು. ಕೀವ್ನ ಹಲವು ಜಿಲ್ಲೆಗಳ 40 ಪ್ರದೇಶಗಳಲ್ಲಿ ವಸತಿ ಕಟ್ಟಡಗಳಿಗೆ ಹಾನಿಯಾಗಿದ್ದು ಅಪಾರ ನಾಶ-ನಷ್ಟ ಸಂಭವಿಸಿದೆ.
ಶೆವ್ಚೆಂಕೊ ಜಿಲ್ಲೆಯಲ್ಲಿ ಕ್ಷಿಪಣಿ ದಾಳಿಯ ಬಳಿಕ ಐದು ಅಂತಸ್ತಿನ ಜನವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಶಾಲೆಯ ಕಟ್ಟಡ, ಸೂಪರ್ ಮಾರ್ಕೆಟ್ಗಳು ಹಾಗೂ ಗೋದಾಮುಗಳಿಗೆ ಹಾನಿಯಾಗಿದೆ. ಕೀವ್ ನಗರದ ಹೊರಪ್ರದೇಶದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಮಿಕೊಲಾ ಕಲಾಶ್ನಿಕ್ ಹೇಳಿದ್ದಾರೆ. ರಷ್ಯದ ನಿಯಂತ್ರಣದಲ್ಲಿರುವ ಲುಷಾಂಕ್ನಲ್ಲಿ ನಾಗರಿಕ ಗುರಿಗಳ ಮೇಲೆ ಇತ್ತೀಚೆಗೆ ಉಕ್ರೇನ್ ನಡೆಸಿದ ದಾಳಿಗೆ ಇದು ಪ್ರತೀಕಾರ ಕ್ರಮವಾಗಿದೆ ಎಂದು ರಷ್ಯಾ ಹೇಳಿದೆ.
ರಷ್ಯಾದ ಹೈಪರ್ಸಾನಿಕ್ ಕ್ಷಿಪಣಿ ದಾಳಿಗೆ ಯುರೋಪಿಯನ್ ಯೂನಿಯನ್ ಖಂಡನೆ
ಉಕ್ರೇನ್ ಮೇಲೆ ಶನಿವಾರ ತಡರಾತ್ರಿ ನಡೆಸಿದ ತೀವ್ರ ವೈಮಾನಿಕ ದಾಳಿಯಲ್ಲಿ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವಿರುವ ಒರೆಶ್ನಿಕ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದನ್ನು ರಷ್ಯ ರವಿವಾರ ದೃಢಪಡಿಸಿದೆ.
ರಷ್ಯದ ಪ್ರದೇಶದೊಳಗೆ ಇತ್ತೀಚೆಗೆ ಉಕ್ರೇನ್ ನಡೆಸಿದ ದಾಳಿಗೆ ಇದು ಪ್ರತೀಕಾರ ಕ್ರಮವಾಗಿದ್ದು ಒರೆಶ್ನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯ ಜೊತೆಗೆ ಇಸ್ಕಾಂಡರ್, ಕಿಂಝಾಲ್ ಮತ್ತು ಸಿರ್ಕಾನ್ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ ಎಂದು ರಷ್ಯದ ರಕ್ಷಣಾ ಇಲಾಖೆ ಹೇಳಿದೆ.
ಪರಮಾಣು ಸಾಮರ್ಥ್ಯದ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯ ಬಳಸಿರುವುದನ್ನು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜ ಕಲ್ಲಾಸ್ ತೀವ್ರವಾಗಿ ಟೀಕಿಸಿದ್ದಾರೆ. ಯುದ್ಧರಂಗದಲ್ಲಿ ತೊಂದರೆಗಳನ್ನು ಎದುರಿಸಿದ ಬಳಿಕ ರಷ್ಯವು ನಗರ ಕೇಂದ್ರಗಳ ಮೇಲೆ ದೊಡ್ಡ ಪ್ರಮಾಣದ ದಾಳಿಯ ಮೂಲಕ ಉಕ್ರೇನ್ ಅನ್ನು ಕಂಗೆಡಿಸಲು ಪ್ರಯತ್ನಿಸುತ್ತಿದೆ ಎಂದವರು ಖಂಡಿಸಿದ್ದಾರೆ.






