ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಶೇಷ ವರದಿಗಾರನಿಗೆ ತಾಲಿಬಾನ್ ನಿಷೇಧ
ರಿಚರ್ಡ್ ಬೆನ್ನೆಟ್ | PC : WHO
ಕಾಬೂಲ್ : ವಿಶ್ವಸಂಸ್ಥೆ ನೇಮಿಸಿರುವ ವಿಶೇಷ ವರದಿಗಾರ ರಿಚರ್ಡ್ ಬೆನ್ನೆಟ್ ಅಫ್ಘಾನಿಸ್ತಾನದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿರುವ ತಾಲಿಬಾನ್, ಅವರು ಅಫ್ಘಾನಿಸ್ತಾನ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಟೋಲೊ ಸುದ್ದಿವಾಹಿನಿ ವರದಿ ಮಾಡಿದೆ.
2021ರಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಆ ದೇಶದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಬೆನೆಟ್ರನ್ನು 2022ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನೇಮಕಗೊಳಿಸಿತ್ತು. ತಾಲಿಬಾನ್ಗಳು ಮಹಿಳೆಯರು ಮತ್ತು ಹುಡುಗಿಯರನ್ನು ನಡೆಸಿಕೊಳ್ಳುವುದು ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದ ಬೆನೆಟ್ ಅಫ್ಘಾನಿಸ್ತಾನದಿಂದ ಹೊರಗೆ ನೆಲೆಸಿದ್ದಾರೆ. ಆದರೆ ಪರಿಸ್ಥಿತಿಯನ್ನು ಪರಾಮರ್ಶಿಸಲು ಹಲವು ಬಾರಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದಾರೆ.
ಕೆಲಸದ ಸಮಯದಲ್ಲಿ ವೃತ್ತಿಪರತೆಗೆ ಬದ್ಧವಾಗಿರಲು ಬೆನೆಟ್ಗೆ ಪದೇ ಪದೇ ವಿನಂತಿಸಿದ ನಂತರವೂ, ಅವರ ವರದಿಗಳು ಪೂರ್ವಾಗ್ರಹ ಪೀಡಿತವಾಗಿದ್ದು ಅಫ್ಘಾನಿಸ್ತಾನ ಮತ್ತು ಅಫ್ಘಾನಿಸ್ತಾನದ ಜನತೆಯ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಉಪಾಖ್ಯಾನಗಳನ್ನು ಆಧರಿಸಿವೆ ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅಫ್ಘಾನಿಸ್ತಾನಕ್ಕೆ ಪ್ರಯಾಣಿಸಲು ವೀಸಾ ಪಡೆಯಲು ಸಾಧ್ಯವಾಗದು ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಖಹರ್ ಬಲ್ಖಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
`ಅಫ್ಘಾನಿಸ್ತಾನದ ವಿರುದ್ಧ ಅಪಪ್ರಚಾರ ಮಾಡಲೆಂದೇ ಬೆನೆಟ್ರನ್ನು ನೇಮಿಸಲಾಗಿದೆ. ಕ್ಷುಲ್ಲಕ ವಿಷಯಗಳನ್ನು ದೊಡ್ಡದು ಮಾಡಿ ಅಪಪ್ರಚಾರ ಮಾಡುವುದೇ ಅವರ ಕೆಲಸವಾಗಿತ್ತು. ಆದ್ದರಿಂದ ಅವರು ದೇಶದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಆಡಳಿತದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ.