ಇರಾನ್ ಮೇಲೆ ದಾಳಿ ಮುಂದುವರಿಸಿದರೆ ಒಂಟಿಯಾಗಲಿದ್ದೀರಿ: ಇಸ್ರೇಲ್ ಪ್ರಧಾನಿಗೆ ಟ್ರಂಪ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ Photo: AI
ವಾಷಿಂಗ್ಟನ್, ಜೂ. 9: ಇರಾನ್ ಮೇಲೆ ದಾಳಿ ಮುಂದುವರಿಸಿದರೆ ಶೀಘ್ರದಲ್ಲೇ ಇಸ್ರೇಲ್ ಒಂಟಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಲೆಬನಾನ್ ಮತ್ತು ಇರಾನ್ ಮೇಲಿನ ಇಸ್ರೇಲ್ ದಾಳಿಗಳು ಟೆಹ್ರಾನ್ ಜೊತೆಗಿನ ಅಮೆರಿಕದ ಕದನ ವಿರಾಮ ಪ್ರಯತ್ನಗಳಿಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ, ಟ್ರಂಪ್ ಅವರು ನೆತನ್ಯಾಹು ಅವರಿಗೆ, ‘ಜಾಗರೂಕರಾಗಿರಿ. ಇಲ್ಲದಿದ್ದರೆ ನೀವು ಶೀಘ್ರದಲ್ಲೇ ಒಂಟಿಯಾಗಲಿದ್ದೀರಿ’ ಎಂದು ತಿಳಿಸಿದ್ದಾರೆ ಎಂದು ಅಮೆರಿಕದ ಸುದ್ದಿ ಸಂಸ್ಥೆ ಆಕ್ಸಿಯೊಸ್ (Axios) ವರದಿ ಮಾಡಿದೆ.
ಪದೇ ಪದೇ ಕದನ ವಿರಾಮ ಉಲ್ಲಂಘನೆಗಳು ನಡೆಯುತ್ತಿರುವಾಗ ಕೇವಲ ಕಾಗದದಲ್ಲಿ ಒಪ್ಪಂದಗಳು ಇರುವ ಔಚಿತ್ಯವನ್ನು ಪ್ರಶ್ನಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಕದನ ವಿರಾಮ ಮಾತುಕತೆ ನಿಯೋಗದ ಮುಖ್ಯಸ್ಥ ಮೊಹಮ್ಮದ್ ಬಾಗೆರ್ ಗಲಿಬಾಫ್, ವಿಶ್ವಾಸ ಬೆಳೆಸುವ ನೈಜ ಇಚ್ಛಾಶಕ್ತಿ ಅಮೆರಿಕದ ಕಡೆಯಿಂದ ಕಾಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ, ರಿಪಬ್ಲಿಕನ್ ಪಕ್ಷದ ಸದಸ್ಯ ಥಾಮಸ್ ಮಾಸ್ಸಿ ಅವರು 1967ರಲ್ಲಿ ಈಜಿಪ್ಟ್ ಸಮೀಪ ಅಮೆರಿಕದ ನೌಕಾಪಡೆಯ ಯುಎಸ್ಎಸ್ ಲಿಬರ್ಟಿ (USS Liberty) ಹಡಗಿನ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಕುರಿತು ಹೊಸ ತನಿಖೆಗೆ ಒತ್ತಾಯಿಸಿದ್ದಾರೆ. ಆ ದಾಳಿಯಲ್ಲಿ 34 ಅಮೆರಿಕದ ಸೈನಿಕರು ಮೃತಪಟ್ಟಿದ್ದು, 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.






