Turkey | ಪ್ರಮುಖ ವಿರೋಧ ಪಕ್ಷದ ಕಚೇರಿಗೆ ನುಗ್ಗಿದ ಪೊಲೀಸರು: ಅಶ್ರುವಾಯು ಪ್ರಯೋಗ

Photo : AP Photo/Ali Unal
ಅಂಕಾರ, ಮೇ 24: ತುರ್ಕಿಯೆ ಪ್ರಮುಖ ವಿರೋಧ ಪಕ್ಷ `ಸಿಎಚ್ಪಿ ಪಾರ್ಟಿ'ಯ ಕಚೇರಿಗೆ ರವಿವಾರ ಪೊಲೀಸರು ನುಗ್ಗಿದ್ದು ಮೂರು ದಿನಗಳಿಂದ ಒಳಗೆ ಕುಳಿತಿದ್ದ ಪಕ್ಷದ ಬೆಂಬಲಿಗರು ಮತ್ತು ಅಧಿಕಾರಿಗಳ ಮೇಲೆ ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿರುವುದಾಗಿ ವರದಿಯಾಗಿದೆ.
ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ ಅಥವಾ ಸಿಎಚ್ಪಿ ಸದಸ್ಯರು ಮತ್ತು ಮೇಲ್ಮನವಿ ನ್ಯಾಯಾಲಯದಿಂದ ನೇಮಕಗೊಂಡಿರುವ ನಾಯಕತ್ವದ ತಂಡದ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಸಿಎಚ್ಪಿ ಅಧ್ಯಕ್ಷರಾಗಿ ಒಜ್ಗರ್ ಒಜೆಲ್ ಆಯ್ಕೆಯನ್ನು ಮೇಲ್ಮನವಿ ನ್ಯಾಯಾಲಯ ರದ್ದುಗೊಳಿಸಿದ್ದು ಅವರನ್ನು ಪಕ್ಷದ ಕಾರ್ಯನಿರ್ವಾಹಕ ಮಂಡಳಿಯನ್ನು ಅಮಾನತುಗೊಳಿಸಿತ್ತು. ಒಝೆಲ್ ಸ್ಥಾನದಲ್ಲಿ ಅವರ ಪೂರ್ವಾಧಿಕಾರಿ ಕೆಮಲ್ ಕಿಲಿಕ್ಡರೊಗ್ಲು ಅವರನ್ನು ನೇಮಕಗೊಳಿಸುವಂತೆ ಆದೇಶಿಸಿತ್ತು. ಆದರೆ ಕಿಲಿಕ್ಡರೊಗ್ಲು ಅವರು ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದನ್ನು ವಿರೋಧಿಸಿದ ಒಝೆಲ್ ಹಾಗೂ ಪಕ್ಷದ ಕೆಲವು ಸದಸ್ಯರು ಪ್ರಧಾನ ಕಚೇರಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು.
ಅವರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸಿದ ಬಳಿಕ ಒಝೆಲ್ ಮತ್ತವರ ಬೆಂಬಲಿಗರು ಸಂಸತ್ತಿನ ಕಡೆಗೆ ಪ್ರತಿಭಟನಾ ಜಾಥಾ ನಡೆಸಿರುವುದಾಗಿ ವರದಿಯಾಗಿದೆ.




