ಗಾಝಾ ಕದನವಿರಾಮ ಒಪ್ಪಂದ ಈಗ ಗೋಚರಿಸುತ್ತಿದೆ: ವಿಶ್ವಸಂಸ್ಥೆಯಲ್ಲಿ ಅಮೆರಿಕ ಹೇಳಿಕೆ
ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್- ಗ್ರೀನ್ಫೀಲ್ಡ್ | PC : X/@USAmbUN
ವಿಶ್ವಸಂಸ್ಥೆ, ಆ.23: ಗಾಝಾ ಕದನವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದ ಈಗ ಗೋಚರಿಸುತ್ತಿದೆ. ಅಮೆರಿಕ ಮುಂದಿರಿಸಿದ ಹೊಸ ಪ್ರಸ್ತಾಪವು ಮೇ ತಿಂಗಳಲ್ಲಿ ಅಧ್ಯಕ್ಷ ಜೋ ಬೈಡನ್ ಮುಂದಿರಿಸಿದ ಮತ್ತು ಜೂನ್ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದಿಸಿದ ಯೋಜನೆಗೆ ಅನುಗುಣವಾಗಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್- ಗ್ರೀನ್ಫೀಲ್ಡ್ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.
ಅಮೆರಿಕದ ಮುಂದಿರಿಸಿದ ಹೊಸ ಪ್ರಸ್ತಾಪವನ್ನು ಇಸ್ರೇಲ್ ಸಮ್ಮತಿಸಿದೆ. ಹಮಾಸ್ ಕೂಡಾ ಒಪ್ಪಿಕೊಳ್ಳಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರು ಒತ್ತಡ ಹೇರಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.
ಭದ್ರತಾ ಮಂಡಳಿಯ ಸದಸ್ಯರಾಗಿ, ನಾವು ಒಂದೇ ಧ್ವನಿಯಲ್ಲಿ ಮಾತನಾಡಬೇಕು ಮತ್ತು ನಮ್ಮ ಪ್ರಭಾವವನ್ನು ಬಳಸಿಕೊಂಡು ಹಮಾಸ್ ಕೂಡಾ ಒಪ್ಪುವಂತೆ ಮಾಡಬೇಕು. ಕದನ ವಿರಾಮ ಮಾತುಕತೆಗೆ ಹಾಗೂ ಈ ವಲಯಕ್ಕೆ ಇದು ನಿರ್ಣಾಯಕ ಕ್ಷಣವಾಗಿದೆ. ಆದ್ದರಿಂದ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸುವುದನ್ನು ತಡೆಯುವ ಯಾವುದೇ ಪ್ರಯತ್ನ ನಡೆಸದಂತೆ ಸಂಬಂಧಿಸಿದ ಪಕ್ಷಗಳಿಗೆ ಬಲಿಷ್ಟ ಸಂದೇಶ ರವಾನಿಸುವ ಕಾರ್ಯವನ್ನು ಭದ್ರತಾ ಮಂಡಳಿಯ ಪ್ರತಿಯೊಬ್ಬ ಸದಸ್ಯರೂ ಮುಂದುವರಿಸಬೇಕು. ಕದನ ವಿರಾಮ ಒಪ್ಪಂದ ಅಂತಿಮಗೊಳ್ಳದಿದ್ದರೆ ಪ್ರಾದೇಶಿಕ ಉಲ್ಬಣಗೊಳ್ಳುವಿಕೆಯ ನಿಜವಾದ ಅಪಾಯವಿದೆ. ಆದ್ದರಿಂದ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಗುರಿ ತಲುಪಿಸಲು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡೋಣ' ಎಂದು ಲಿಂಡಾ ಥಾಮಸ್ ವಿನಂತಿಸಿದರು.
ಮೇ ತಿಂಗಳಿನಲ್ಲಿ ಬೈಡನ್ ಮುಂದಿರಿಸಿದ ಪ್ರಸ್ತಾಪವನ್ನು ಹಮಾಸ್ ಒಪ್ಪಿಕೊಂಡಿತ್ತು. ಆದರೆ ಭವಿಷ್ಯದಲ್ಲಿ ಗಾಝಾದಲ್ಲಿ ಇಸ್ರೇಲ್ನ ಸೇನಾ ಉಪಸ್ಥಿತಿ ಮತ್ತು ಫೆಲಸ್ತೀನ್ ಕೈದಿಗಳ ಬಿಡುಗಡೆ ವಿಷಯದಲ್ಲಿ ಬಿಕ್ಕಟ್ಟು ಮೂಡಿತ್ತು.