ಝಪೋರಿಝಿಯಾ ಅಣುವಿದ್ಯುತ್ ಸ್ಥಾವರದಲ್ಲಿ ಬೆಂಕಿ ದುರಂತ ?
ಸಾಂದರ್ಭಿಕ ಚಿತ್ರ
ಕೀವ್ : ರಶ್ಯ ಆಕ್ರಮಿತ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ರವಿವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ.
ಆದರೆ ಸ್ಥಾವರದಲ್ಲಿ ಬೆಂಕಿ ದುರಂತ ಸಂಭವಿಸಿದಂತೆ ರಶ್ಯದ ಪಡೆಗಳು ನಾಟಕವಾಡಿವೆ. ಸ್ಥಾವರದೊಳಗೆ ಟಯರ್ ಗಳಿಗೆ ಬೆಂಕಿ ಹಚ್ಚುವ ಮೂಲಕ ಸ್ಥಾವರಕ್ಕೇ ಬೆಂಕಿಬಿದ್ದಿದೆ ಎಂದು ಸ್ಥಳೀಯ ಜನರಲ್ಲಿ ಗಾಬರಿ, ಆತಂಕ ಸೃಷ್ಟಿಸುವುದು ಅವರ ಹುನ್ನಾರವಾಗಿದೆ. ಹೆದರಿದ ಸ್ಥಳೀಯರು ಈ ಪ್ರದೇಶದಿಂದ ಸ್ಥಳಾಂತರಗೊಳ್ಳಬೇಕು ಎಂಬುದು ರಶ್ಯದ ಇರಾದೆಯಾಗಿದೆ. ಇದು ಪ್ರಚೋದನೆಯಾಗಿರಬಹುದು ಅಥವಾ ಸ್ಥಳೀಯರಲ್ಲಿ ಗಾಭರಿ ಹುಟ್ಟಿಸುವ ತಂತ್ರವಾಗಿರಬಹುದು ಎಂದು ಉಕ್ರೇನ್ ಅಧಿಕಾರಿ ಯೆವ್ಹೆನ್ ಯೆವುಶೆಂಕೋ ಆರೋಪಿಸಿದ್ದಾರೆ.
ಉಕ್ರೇನ್ ಅನ್ನು ಬ್ಲ್ಯಾಕ್ಮೇ ಲ್ ಮಾಡಲು ರಶ್ಯವು ಝಪೋರಿಝಿಯಾ ಸ್ಥಾವರವನ್ನು ಬಳಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಪಡೆಗಳ ಶೆಲ್ ದಾಳಿಯಿಂದ ಝಪೋರಿಝಿಯಾ ಅಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ದುರಂತ ಸಂಭವಿಸಿದೆ ಎಂದು ರಶ್ಯ ಆರೋಪಿಸಿದೆ. ಸೋಮವಾರ ಬೆಳಿಗ್ಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಉಕ್ರೇನ್ ಸರಕಾರದ ಮೂಲಗಳು ಹೇಳಿವೆ.
ಬೆಂಕಿ ದುರಂತವು ಪರಮಾಣು ಸುರಕ್ಷತೆಯ ಮೇಲೆ ಪರಿಣಾಮ ಬೀರಿಲ್ಲ. ಅಣು ವಿದ್ಯುತ್ ಸ್ಥಾವರದ ವಿರುದ್ಧದ ಯಾವುದೇ ಮಿಲಿಟರಿ ಕ್ರಮವು ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಳೆದ ಮೇ ತಿಂಗಳಿನಲ್ಲಿ ಸ್ಥಾಪಿಸಿದ ಅಂತರರಾಷ್ಟ್ರೀಯ ಪರಮಾಣು ತತ್ವವನ್ನು ಉಲ್ಲಂಘಿಸಿದೆ ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(ಐಎಇಎ) ನಿರ್ದೇಶಕ ರಫೇಲ್ ಗ್ರಾಸಿ ಹೇಳಿದ್ದಾರೆ.