ಕಲಬುರಗಿ: ಗಾಂಜಾ ಮಾರಾಟ; ಇಬ್ಬರ ಬಂಧನ
6 ಲಕ್ಷ 50 ಸಾವಿರ ಮೌಲ್ಯದ ಗಾಂಜಾ ವಶ

ಶಹಬಾಝ್ | ಬಾನು
ಕಲಬುರಗಿ: ನಗರದ ಲಂಗಾರ ಹನುಮಾನ ಗುಡಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 6 ಲಕ್ಷ 50 ಸಾವಿರ ಮೌಲ್ಯದ 6.915 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಜಾದಪುರ ರಸ್ತೆಯ ಉಮರ್ ಕಾಲೋನಿ ನಿವಾಸಿ ಶಹಬಾಝ್ ಅಬ್ದುಲ್ ರಶೀದ್ (30), ಹಾಗರಗಾ ರಸ್ತೆಯ ಅಮನ ನಗರ ನಿವಾಸಿ ಬಾನು (31) ಬಂಧಿತ ಆರೋಪಿಗಳಾಗಿದಾರೆ. ಇವರು ಮಹಾರಾಷ್ಟ್ರದ ಜಲಗಾಂವ್ ನಿಂದ ಗಾಂಜಾ ತಂದು ಉಮರ್ ಕಾಲೋನಿಯ ನಿವಾಸಿ ಅಬ್ಬು ಶೇಖ್ ಯಾನೆ ಸ್ಪೀಡ್ ಅಬ್ಬು ಮತ್ತು ಬಾಪು ನಗರ ನಿವಾಸಿ ರಮೇಶ ವಿಜಯಕುಮಾರ ಕಾಳೆ ಎಂಬುವವರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಾಲ್ವರು ಆರೋಪಿಗಳ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ NDPS ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರಿ ದಾಳಿಯನ್ನು ಯಶಸ್ವಿಯಾಗಿ ಕೈಗೊಂಡ ಸಬ್ ಅರ್ಬನ್ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಅವರು ಶ್ಲಾಘಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.





