ನೆರೆಹಾನಿಯಾದ ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ 500 ಕೋಟಿ ರೂ. ನೀಡಬೇಕು: ಛಲವಾದಿ ನಾರಾಯಣಸ್ವಾಮಿ

ರಾಯಚೂರು: ನೆರೆ ಹಾವಳಿ,ಮಳೆಯಿಂದ ಹಾನಿಯಾದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜ್ಯ ಸರ್ಕಾರ ರೂ.500 ಕೋಟಿ ಪರಿಹಾರ ಘೋಷಣೆ ಮಾಡಬೇಕು ವೈಮಾನಿಕ ಸಮೀಕ್ಷೆ ಮಾಡುವ ಜೊತೆಗೆ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರ್ಥಮಾಡಿಕೊಂಡು ಸಂತ್ರಸ್ತರ ನೆರವಿಗೆ ಬರಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಬೆಳೆ ಹಾನಿಯಾಗಿದೆ, ಅನೇಕರು ಮನೆ ಕಳೆದುಕೊಂಡಿದ್ದಾರೆ. ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪ್ರವಾಸ ಕೈಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಡವಾಗಿಯಾದರೂ ವೈಮಾನಿಕ ಸಮೀಕ್ಷೆ ಮಾಡಲು ಮುಂದಾಗಿದ್ದರು ಸ್ವಾಗತಾರ್ಹ. ಕೇವಲ ವೈಮಾನಿಕ ಸಮೀಕ್ಷೆಯಿಂದ ವಾಸ್ತವ ಪರಿಸ್ಥಿತಿ ಅರ್ಥವಾಗಲ್ಲ, ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ರೈತರಿಗೆ, ಸಂತ್ರಸ್ತರಿಗೆ ಸಾಂತ್ವಾನ ಹೇಳಬೇಕು. ಈ ಭಾಗದ ಹಾನಿಗೆ ರೂ.200 ಕೋಟಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಸರಿಯಲ್ಲ ಕನಿಷ್ಠ 500 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಳೆಯಿಂದ ಕೇವಲ ಬೆಳೆ ಹಾನಿಯಾಗದೇ ಅನೇಕರು ಮನೆ ಕಳೆದುಕೊಂಡಿದ್ದಾರೆ. ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿಗಳು ರಸ್ತೆಯಲ್ಲಿಯೋ ರಸ್ತೆಯೇ ಗುಂಡಿಗಳ ಮೇಲೆ ಎನ್ನುವಂತಹ ಪರಿಸ್ಥಿತಿ ಇದೆ. ರಾಯಚೂರು ಜಿಲ್ಲಾ ಉಸ್ತುವಾರಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಅನ್ಯ ಜಿಲ್ಲೆಯವರೇ ಉಸ್ತುವಾರಿ ವಹಿಸಿಕೊಂಡಿದ್ದು ಜನರ ಸಂಕಷ್ಟ ಅರಿಯಲು ವಿಫಲರಾಗಿದ್ದಾರೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ ಇಂತಹ ಸಚಿವರಿಂದ ಕಲ್ಯಾಣ ಅಸಾಧ್ಯ ಎಂದು ಲೇವಡಿ ಮಾಡಿದರು.
ಖರ್ಗೆ ಅವರಿಗೆ ಮೊದಲು ಪರಿಹಾರ ನೀಡಲಿ:
ಕಲಬುರ್ಗಿಯ ರೈತನೊಬ್ಬ 4 ಎಕರೆ ತೊಗರಿ ಬೆಳೆ ಹಾನಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಅಳಲು ತೋಡಿಕೊಂಡರೆ ಖರ್ಗೆ ಅವರು ನನ್ನದೂ 40 ಎಕರೆ ಹೋಗಿದೆ ಎಂದು ಉತ್ತರ ನೀಡುವುದರು ಎಷ್ಟು ಸರಿ, ರಾಜ್ಯ ಸರ್ಕಾರ 4 ಎಕರೆಗೆ ಕಳೆದುಕೊಂಡ ರೈತನಿಗೆ ತಡವಾದರೂ ಪರವಾಗಿಲ್ಲ ಖರ್ಗೆ ಅವರಿಗೆ ಮೊದಲು ಪರಿಹಾರ ಕೊಟ್ಟು ಬಿಡಲಿ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರು 'ಪ್ರಧಾನಿ ಮೋದಿ, ಗೃಹ ಸಚಿವರು ಕತ್ತೆ ಕಾಯ್ತಾ ಇದ್ದಾರಾ' ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು 'ಈ ಹೇಳಿಕೆ ಕೊಟ್ಟವರು ಕತ್ತೆಗಳು, ಅವರನ್ನೂ ಪ್ರಧಾನಿ ಮೋದಿ ಅವರನ್ನು ಕಾಯ್ತಾ ಇದಾರೆ ಹೇಳಿಕೆಯಲ್ಲಿ ತಪ್ಪಿಲ್ಲ' ಎಂದು ಲೇವಡಿ ಮಾಡಿದ ಅವರು ಬೇರೆಯವರಿಗೆ ನೀತಿ ಪಾಠ ಹೇಳುವ ಕಾಂಗ್ರೆಸ್ ನಾಯಕರು ಈ ಹಿಂದೆ ಪ್ರಧಾನಿಯನ್ನು ವಿಷಸರ್ಪ ಎಂತೆಲ್ಲ ಜರಿದಿದ್ದರು ಇಂತಹ ಹೇಳಿಕೆ ನೀಡುವಾಗ ತಮಗೂ ನೀತಿಪಾಠ ಅನ್ವಯವಾಗುತ್ತೆ ಎಂದು ಅರಿಯಬೇಕು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಮೂರು ಕುಟುಂಬಗಳ ಕೈಯಲ್ಲಿರುವ ಕಾರಣ ಅಭಿವೃದ್ಧಿ ಕಾಣದೇ ಹಾಳಾಗುತ್ತಿದೆ. ಇವರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.







