40 ಕೋಟಿ ರೂ. ಪರಿಹಾರ ಪಾವತಿ ಬಾಕಿ ಹಿನ್ನೆಲೆ : ಕಲಬುರಗಿ ಎಸಿ ಕಚೇರಿಯ ಪೀಠೋಪಕರಣ ಜಪ್ತಿ

ಕಲಬುರಗಿ : ರೈತರ 40 ಕೋಟಿ ರೂ. ಗೂ ಹೆಚ್ಚು ಪರಿಹಾರ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಲಬುರಗಿ 2ನೇ ಸಿವಿಲ್ ನ್ಯಾಯಾಲಯದ ಆದೇಶದಂತೆ ಸೋಮವಾರ ಕಲಬುರಗಿ ಸಹಾಯಕ ಆಯುಕ್ತರ ಕಾರ್ಯಾಲಯದ ಪೀಠೋಪಕರಣಗಳು ಜಪ್ತಿ ಮಾಡಲಾಯಿತು.
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಸಹಾಯಕ ಆಯುಕ್ತರ ಕಂಪ್ಯೂಟರ್, ಕಚೇರಿಯ ಸಿಬ್ಬಂದಿಗಳ ಕಂಪ್ಯೂಟರ್, ಪ್ರಿಂಟರ್, ಸರಕಾರಿ ಸೀಲ್ (ಮುದ್ರೆ)ಗಳು ಸೇರಿದಂತೆ ಹಲವು ಪೀಠೋಪಕರಣಗಳನ್ನು ನ್ಯಾಯಲಯದ ಬಿಲಿಫ್ ಅವರ ಸಮ್ಮುಖದಲ್ಲಿ ನ್ಯಾಯವಾದಿ ಚಂದ್ರಕಾಂತಗ ಮಲ್ಲಾಬಾದಿ ಅವರು ಜಪ್ತಿ ಮಾಡಿಕೊಂಡರು.
ಶಿವಲಿಲಾ ಮತ್ತು ರಮೇಶ್ ಮಳಪ್ಪ ಎಂಬುವವರು 1971 ರಲ್ಲಿ ಕುಸನೂರು ಪ್ರದೇಶದಲ್ಲಿರುವ 5.5 ಗುಂಟೆ ಜಮೀನನ್ನು ಪಿ.ಜಿ ಸೆಂಟರ್ ಗಾಗಿ ಸರಕಾರ ಖರೀದಿ ಮಾಡಿತ್ತು. ಸರಕಾರ ಜಮೀನಿಗೆ ಸಮರ್ಪಕ ಬೆಲೆ ನೀಡಬೇಕೆಂದು ಸಿವಿಲ್ ನ್ಯಾಯಾಲಯದಲ್ಲಿ ಸರಕಾರದ ವಿರುದ್ಧ ದಾವಿ ಹಾಕಿದಕ್ಕೆ 1993 ನ್ಯಾಯಾಲಯ ಪರಿಹಾರ ನಿಗದಿಪಡಿಸಿ ಪರಿಹಾರ ನೀಡಲು ಆದೇಶ ನೀಡಿತು.
ಸಹಾಯಕ ಆಯುಕ್ತರು ಗುಲ್ಬರ್ಗಾ ವಿಶ್ವ ವಿದ್ಯಾಲಯದಿಂದ ಪರಿಹಾರದ ಹಣ ಪಡೆಯುವಂತೆ ವಿವಿಗೆ ಪತ್ರ ಬರೆದರೂ, ಹಣ ಪಾವತಿ ಮಾಡಿರಲಿಲ್ಲ. ನ್ಯಾಯಲಯದ ಆದೇಶ ಇದ್ದರೂ, ಪರಿಹಾರ ನೀಡದಿರುವ ಬಗ್ಗೆ ರೈತರಿಬ್ಬರು 2018ರಲ್ಲಿ ನ್ಯಾಯಲಯಕ್ಕೆ ಐಪಿ ಹಾಕಿದಕ್ಕೆ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ನೀಡಿತ್ತು.
ಪುನಃ ಪರಿಹಾರ ನೀಡಲು ವಿಳಂಬ ಮಾಡಿದಕ್ಕೆ ಫಲಾನುಭಾವಿ ಮತ್ತು ನ್ಯಾಯಲಯದ ಬಿಲಿಫ್ ಸಮ್ಮುಖದಲ್ಲಿ ಸೋಮವಾರ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣ ಜಪ್ತಿ ಮಾಡಲಾಗಿದೆ ಎಂದು ವಾದ ಮಂಡಿಸಿದ ನ್ಯಾಯವಾದಿ ಚಂದ್ರಕಾಂತ್ ಮಲ್ಲಬಾದಿ ಅವರು ವಾರ್ತಾಭಾರತಿಗೆ ತಿಳಿಸಿದ್ದಾರೆ.







