ಕಲಬುರಗಿಯಲ್ಲಿ ಬೆಳೆ ಹಾನಿ ಪ್ರದೇಶ ವೀಕ್ಷಿಸಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ

ಕಲಬುರಗಿ: ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಮಂಗಳವಾರ ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಮತ್ತು ಆಳಂದ ತಾಲೂಕಿನ ಕಡಗಂಚಿ ಸೇರಿದಂತೆ ಹಲವು ಕಡೆ ಇತ್ತೀಚಿನ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಬೆಳೆ ಪ್ರದೇಶಗಳನ್ನು ವೀಕ್ಷಿಸಿದರು.
ಸಾವಳಗಿ ಕ್ರಾಸ್‌ನಲ್ಲಿ ತೊಗರಿ ಬೆಳೆ ಹಾನಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಹಿಂದಿನ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸುಮಾರು 650 ಕೋಟಿ ರೂ. ಪರಿಹಾರ ನೀಡಲಾಗಿತ್ತು. ಈ ಬಾರಿ ಸಹ ಬೆಳೆ ಹಾನಿ ಸಂಭವಿಸಿರುವುದರಿಂದ ಬೆಳೆ ವಿಮೆ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲು ಮುಖ್ಯಮಂತ್ರಿ ಅವರು ಘೋಷಣೆ ಮಾಡಲಿದ್ದಾರೆ ಎಂದರು.
ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಬೆಳೆ ಹಾನಿ ವರದಿಯಾಗಿದೆ. ಮುಖ್ಯಮಂತ್ರಿ ಇಂದು ವೈಮಾನಿಕ ಸಮೀಕ್ಷೆ ನಡೆಸಿ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಹಾರ ಕುರಿತು ಘೋಷಣೆ ಮಾಡಲಿದ್ದಾರೆ. ಜೊತೆಗೆ ಎನ್‌ಡಿಆರ್‌ಎಫ್ ನಿಧಿಯಿಂದ ಕೇಂದ್ರ ಸರ್ಕಾರದ ಸಹಾಯಕ್ಕಾಗಿ ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತರ ಪರವಾಗಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ ಮನವಿ ಪತ್ರ ಸಲ್ಲಿಸಿ, ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಬೆಳೆ ಸಾಲ ಮನ್ನಾ ಮಾಡುವ ಆರನೇ ಗ್ಯಾರಂಟಿ ಘೋಷಣೆ ಮಾಡಬೇಕೆಂದು ಬೇಡಿಕೆ ಇಟ್ಟರು.
ಸಚಿವರು ಕಡಗಂಚಿ ಮತ್ತು ಸರಡಗಿ ಬಿ.ಗ್ರಾಮಗಳಲ್ಲಿ ಹೊಲಗಳಲ್ಲಿ ನೀರು ನಿಂತು ಹಾನಿಗೊಂಡ ತೊಗರಿ ಮತ್ತು ಹತ್ತಿ ಬೆಳೆಗಳನ್ನು ಸಹ ಪರಿಶೀಲಿಸಿದರು.
ಈ ವೇಳೆ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.







