'ಮತಗಳ್ಳತನ' ಆರೋಪ : ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರರ ಮನೆ ಮೇಲೆ ಎಸ್ಐಟಿ ದಾಳಿ

ಕಲಬುರಗಿ : 'ಮತಗಳ್ಳತನ' ಆರೋಪಕ್ಕೆ ಸಂಬಂಧಿಸಿದಂತೆ ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಮಕ್ಕಳಿಗೆ ಸೇರಿದ ಮನೆಗಳು ಸೇರಿದಂತೆ ಮೂರು ಮನೆಗಳ ಮೇಲೆ ಎಸ್ಐಟಿ ತಂಡದ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಗುಬ್ಬಿ ಕಾಲೂನಿಯಲ್ಲಿರುವ ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ರಾಜರಾಜೇಶ್ವರಿ ನಗರ (ವಸಂತ ನಗರ) ದಲ್ಲಿರುವ ಇನ್ನೋರ್ವ ಪುತ್ರ ಉದ್ಯಮಿ ಸಂತೋಷ್ ಗುತ್ತೇದಾರ್ ಅವರುಗಳ ನಿವಾಸ ಸೇರಿದಂತೆ ಉದ್ಯಮದ ಕ್ಷೇತ್ರಗಳ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ಅಲ್ಲದೆ, ಇಲ್ಲಿನ ಖುಭಾ ಪ್ಲಾಟ್ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಮಲ್ಲಿಕಾರ್ಜುನ್ ಮಹಾಂತಗೋಳ ಅವರ ಮನೆಯ ಮೇಲೂ ದಾಳಿ ನಡೆಸಿ, ತಪಾಸಣೆ ನಡೆಸುತ್ತಿದ್ದಾರೆ.
ಎಸ್ಐಟಿ ಎಸ್ಪಿ ಶುಭನ್ವಿತ ಅವರನ್ನೊಳಗೊಂಡ ತನಿಖಾ ತಂಡವು ಮತಗಳ್ಳತನ ಪ್ರಕರಣ ಕುರಿತು ತೀವ್ರ ತನಿಖೆ ನಡೆಸುತ್ತಿದೆ.
ಆಳಂದ ಮತಕ್ಷೇತ್ರದಲ್ಲಿ 2023ರ ಚುನಾವಣೆಗಿಂತ ಮೊದಲು ವೋಟ್ ಡಿಲಿಟ್ ಮಾಡುವ ಯತ್ನ ನಡೆದಿತ್ತು ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದರು.





