ಸಂವಿಧಾನವನ್ನು ಬದಲಾಯಿಸುವುದೇ ಬಿಜೆಪಿ, ಆರೆಸ್ಸೆಸ್ ಅಜೆಂಡಾ: ಸಾತಿ ಸುಂದರೇಶ್

ಕಲಬುರಗಿ: ಸಂವಿಧಾನ ಬದಲಾಯಿಸುವುದೇ ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾವಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದ್ದಾರೆ.
ನಗರದ ಜಗತ್ ವೃತ್ತದಲ್ಲಿ ಮಂಗಳವಾರ ನಡೆದ ಸಿಪಿಐ ಪಕ್ಷದ ಶತಮಾನೋತ್ಸವ ಸಮಾರಂಭದ ಬಹಿರಂಗ ಸಭೆ ಮತ್ತು ಜಾಥಾ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಾತಿ ಸುಂದರೇಶ್, ಸಂವಿಧಾನವನ್ನು ಬದಲಿಸುವುದಕ್ಕೆ ಅವಕಾಶ ಮಾಡಿಕೊಡದೆ ನಾವೆಲ್ಲರೂ ಒಂದಾಗಿ ಸಂವಿಧಾನ ಉಳಿಸಲು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಸಮತಾ ರಾಜ್ಯದ ಕನಸುಗಳೊಂದಿಗೆ ಕಳೆದ 1925 ರಲ್ಲಿ ಜನ್ಮ ತಾಳಿದ ಸಿಪಿಐ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ಇದೀಗ ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ಹಾಗೂ ಶ್ರಮಿಕ ಕಾರ್ಮಿಕ, ರೈತ, ಬಡವರ ವಿರೋಧಿ ಸರ್ಕಾರಗಳ ವಿರುದ್ಧ ಹೋರಾಟ ಮಾಡಲಾಗುತ್ತಿದೆ.ರಾಜ್ಯದಲ್ಲಿಯೇ ಆರ್ಥಿಕ ತಲಾದಾಯದಲ್ಲಿ ಕಲಬುರಗಿ ಕೊನೆ ಸ್ಥಾನದಲ್ಲಿದೆ. ಈ ತಲಾದಾಯ ಹೆಚ್ಚಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಕೃಷಿ ವಲಯ ಮತ್ತು ಕೈಗಾರಿಕೆ ಘಟಕಗಳು ಸ್ಥಾಪನೆಗಾಗಿ ಪಕ್ಷ ಹೋರಾಟ ರೂಪಿಸಲು ನಾವೆಲ್ಲ ಸಂಕಲ್ಪ ಮಾಡಬೇಕು ಎಂದರು.
ರಾಜ್ಯ ಮಂಡಳಿ ಸದಸ್ಯ ಕೆ.ಎಸ್.ಜನಾರ್ಧನ್ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಆರೆಸ್ಸೆಸ್ ನಿರ್ದೇಶನದಂತೆ ದೇಶದ ಸಂವಿಧಾನ ತಿದ್ದುಪಡಿ ಮಾಡುವ ಹುನ್ನಾರ ಮಾಡುತ್ತಿದೆ. ಕೋಮುವಾದ ಎದುರಿಸಲು ನಾವೆಲ್ಲ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಮಹೇಶ್ ಕುಮಾರ್ ರಾಠೋಡ್ ಮಾತನಾಡಿ, ಇವತ್ತು ಕೋಮುವಾದಿಗಳು ದೇಶದ ಜನರ ಸಂಸ್ಕೃತಿಯನ್ನು ಸರ್ವನಾಶ ಮಾಡಲು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ದುಡಿಯುವ ವರ್ಗ ಒಂದಾಗಬೇಕಿದೆ. ಕಾರ್ಮಿಕರು ಭಿನ್ನಾಭಿಪ್ರಾಯ ಬದಗಿಟ್ಟು ಒಂದಾಗಬೇಕಿದೆ. ಕೋಮುವಾದಿಗಳ ಬಣ್ಣ ಬಯಲು ಮಾಡಬೇಕಿದೆ. ಆರೆಸ್ಸೆಸ್ - ಬಿಜೆಪಿ ವಾಟ್ಸಾಪ್ ಯುನಿವರ್ಸಿಟಿ ಮೂಲಕ ಮನೆ, ಮನಸ್ಸುಗಳನ್ನು ಒಡೆಯುವಂತ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.
ಎಸ್ ಯುಸಿಐ ಜಿಲ್ಲಾ ಮುಖಂಡ ಮಹೇಶ್ ಎಸ್.ಬಿ ಮಾತನಾಡಿ, ಲೆನಿನ್ ಕಾಲದಲ್ಲಿ ಭಾರತದಲ್ಲಿ ಎಡ ಚಳುವಳಿ ಪ್ರಾರಂಭವಾಯಿತು. ಇವತ್ತು ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದರೂ ಕೂಡ ಪಕ್ಷ ಕೆಲಸ ಮಾಡುತ್ತಿದೆ ಎಂದರು.
ಡಿಎಸ್ಎಸ್ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಪದ್ಮಾವತಿ ಮಾಲಿಪಾಟೀಲ್, ಪ್ರಭುದೇವ ಯಳಸಂಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುಧಾಮ್ ಧನ್ನಿ, ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ಹಣಮಂತ್ರಾಯ ಅಟ್ಟೂರು, ಸಾಜಿದ್ ಅಹ್ಮದ್, ಎಚ್.ಎಸ್. ಪತಕಿ, ಸಂಪತರಾವ್, ಸಿದ್ದಪ್ಪ ಫಾಲ್ಕಿ, ಶರಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.







