ಜೇವರ್ಗಿಯಲ್ಲಿ ಭಾರೀ ಮಳೆ: ಹಲವು ಮನೆಗಳು ಜಲಾವೃತ; ಜನಜೀವನ ಅಸ್ತವ್ಯಸ್ತ

ಕಲಬುರಗಿ: ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜೇವರ್ಗಿ ಪಟ್ಟಣದ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ವಾರ್ಡ್ ಸಂಖ್ಯೆ 16 ಜೋಪಡಪಟ್ಟಿ ಪ್ರದೇಶ (ಕೊಳೆಗೇರಿ ಪ್ರದೇಶ), ಬೊಗ್ಗಿ ಪ್ರದೇಶ, ದರ್ಗಾ ಕಾಲೋನಿ ಮತ್ತು ವಾರ್ಡ್ ಸಂಖ್ಯೆ 1, ಪ್ರದೇಶದಲ್ಲಿ ನೂರಾರು ಮನೆಗಳಿಗೆ 4 ರಿಂದ 5 ಫೀಟ್ ವರೆಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮನೆಗಳಲ್ಲಿದ್ದ ದವಸ - ಧಾನ್ಯಗಳು ನೀರುಪಾಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗಳು ಹಾನಿಗೀಡಾಗಿವೆ. ಜೇವರ್ಗಿ ಪಟ್ಟಣದ ಸಮೀಪ ಇರುವ ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ಬೆಳೆದಿರುವ ಎಲ್ಲ ಬೆಳೆಗಳೂ ನಷ್ಟವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ಈ ನಿಟ್ಟಿನಲ್ಲಿ, ನಾವು ತಕ್ಷಣ ಜೇವರ್ಗಿಯ ಶಾಸಕ ಅಜಯ್ ಸಿಂಗ್, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್, ಟಿಎಂಸಿ ಮುಖ್ಯ ಅಧಿಕಾರಿ ಮತ್ತು ಇತರ ಜಿಲ್ಲಾ ಅಧಿಕಾರಿಗಳಿಗೆ ಘಟನೆಯ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದೇವೆ ಎಂದು ಟಿಪ್ಪು ಸುಲ್ತಾನ್ ಸಮಿತಿ ಅಧ್ಯಕ್ಷ ವಕೀಲ ಮೊಹಿಯುದ್ದೀನ್ ಇನಾಮದಾರ್ ಅವರು ಹೇಳಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಬೇಕು, ಸರಿಯಾದ ಮೌಲ್ಯಮಾಪನ ನಡೆಸಬೇಕು ಮತ್ತು ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು. ಸ್ಥಳಾಂತರಗೊಂಡ ಕುಟುಂಬಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.







