ಕಲಬುರಗಿ | ಹೈದರಾಬಾದ್ ಸಂಸ್ಥಾನ, ಬ್ರಿಟಿಷರ ನಡುವಿನ ಸಂಬಂಧಗಳ ಬಗ್ಗೆ ಸಂಶೋಧನೆ ಅಗತ್ಯ: ಡಾ.ರಘುಶಂಖ ಭಾತಂಬ್ರಾ

ಕಲಬುರಗಿ : ಹೈದರಾಬಾದ್ ಸಂಸ್ಥಾನ ಮತ್ತು ಬ್ರಿಟಿಷರ ಮಧ್ಯೆ ಇರುವ ಸಂಬಂಧಗಳ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ ಎಂದು ಡಾ.ರಘುಶಂಖ ಭಾತಂಬ್ರಾ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಕಲಬುರಗಿಯ ವಿಭಾಗೀಯ ಕಚೇರಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ 2025ರ ಮಾ.20, 21ರಂದು ನಡೆದ 'ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ' ಎಂಬ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು 'ಹೈದರಾಬಾದ್ ಸಂಸ್ಥಾನ ಮತ್ತು ಬ್ರಿಟಿಷರ ಸಂಬಂಧಗಳು' ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.
ಪರಧರ್ಮ ಸಹಿಷ್ಣುತೆ, ಅತಿಥಿ ದೇವೋಭವ, ಅಹಿಂಸೆ, ಮೃದುಧೋರಣೆ ಇತ್ಯಾದಿ ಸಾರ್ವತ್ರಿಕ ಜೀವನ ಮೌಲ್ಯಗಳನ್ನು ಅನುಸರಿಸಿದ ಪರಿಣಾಮವಾಗಿ ಭಾರತೀಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ದೇಶಿ ಸಂಸ್ಥಾನಿಕರಲ್ಲಿನ ದ್ವೇಷಾಸೂಯೆ, ಸ್ವಾರ್ಥ ಸಾಧನೆಗಾಗಿ ಬಡಿದಾಟ, ಒಳಪಿತೂರಿ, ಸಾಮ್ರಾಜ್ಯ ವಿಸ್ತರಣೆಗಳ ಪರಿಣಾಮದಿಂದಾಗಿ ಜನಸಾಮಾನ್ಯರು ನೋವು ಹಿಂಸೆ ಹಲವು ಬಗೆಯ ದೌರ್ಜನ್ಯಗಳನ್ನು ಸಹಿಸಿಕೊಳ್ಳಬೇಕಾಯಿತು ಎಂದರು.
ಲಾರ್ಡ್ ಕ್ಲೈವ್ ನಿಂದ ಹಿಡಿದು ಲಾರ್ಡ್ ಡಾಲ್ ಹೌಸಿಯವರೆಗೆ ಭಾರತಕ್ಕೆ ಬಂದ ಗವರ್ನರ್ ಜನರಲ್ ಗಳು ತಮ್ಮ ಸಾಮ್ರಾಜ್ಯ ವಿಸ್ತರಣಾವಾದಿ ನೀತಿಯನ್ನು ಜಾರಿಗೆ ತಂದು ಕಂಪನಿ ಸರ್ಕಾರವನ್ನು ಭದ್ರಪಡಿಸಿದರು. ಅದರ ಪರಿಣಾಮವಾಗಿ ಭಾರತೀಯರು ತಮ್ಮ ಮೂಲಭೂತ ಅವಶ್ಯಕತೆಗಳನ್ನು, ಜನ್ಮಸಿದ್ಧ ಹಕ್ಕು ಬಾಧ್ಯತೆಗಳನ್ನು ಕಳೆದುಕೊಂಡರು. ಒಡೆದಾಳುವ ನೀತಿಯಿಂದ ದೇಶಿ ಸಂಸ್ಥಾನಗಳ ಮೇಲೆ ಹಿಡಿತ ಸಾಧಿಸಿದರು. ಬ್ರಿಟಿಷರು ತಮ್ಮ ಆಕ್ರಮಣಶೀಲ ಪ್ರವೃತ್ತಿ, ವಿಸ್ತರಣಾವಾದಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತ, ಸಮಾಜೋ-ಧಾರ್ಮಿಕ ರಂಗದಲ್ಲಿನ ವೈಪರಿತ್ಯಗಳನ್ನು, ಅಸಂಘಟಿತ ರಾಜರನ್ನು ಬಂಡವಾಳ ಮಾಡಿಕೊಂಡು ಭಾರತೀಯರನ್ನು ಗುಲಾಮಗಿರಿ ವ್ಯವಸ್ಥೆಗೊಳಪಡಿಸಿದರು ಎಂದು ವಿವರಿಸಿದರು.
1724ರಿಂದ ನಿಜಾಂ ಉಲ್ ಮುಲ್ಕ ಇಂದ ಪ್ರಾರಂಭಗೊಂಡು ಅಸಫಿಯಾ ಸಾಮ್ರಾಜ್ಯವು 1948ರವರೆಗೆ ಈ ಭಾಗದ ಮೇಲೆ ಆಳ್ವಿಕೆ ನಡೆಸಿತು. ಸುಮಾರು 224 ವರ್ಷಗಳ ಆಡಳಿತಾವಧಿಯಲ್ಲಿ ನಿಜಾಂ ಸಂಸ್ಥಾನದ ಏಳು ಸುಲ್ತಾನರು ಈ ಭಾಗವನ್ನು ಆಳಿದ್ದಾರೆ. ನಿಜಾಂ ಸಾಮ್ರಾಜ್ಯದ ವಿಸ್ತೀರ್ಣ 2,13,190 ಚ.ಕಿ. ಮೀಟರ್ ಗಳಷ್ಟಿತ್ತು. ಹೈದರಾಬಾದ್ ನಿಜಾಂ ಸಂಸ್ಥಾನದಲ್ಲಿ ಐದುಕೋಟಿ ಎಕರೆ ಕೃಷಿಭೂಮಿಯ ವ್ಯವಸಾಯವಿತ್ತು. ಇದರಲ್ಲಿ ನಿಜಾಮರ ಹತ್ತಿರ 50 ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನು ಇತ್ತು. ಅಂದರೆ ರಾಜ್ಯದ 1/10ರಷ್ಟು ಭೂಮಿಯ ಅಧಿಪತ್ಯವನ್ನು ನಿಜಾಮರು ಹೊಂದಿದ್ದರು. ರಾಜ್ಯದ ಶೇ.15ರಷ್ಟು ಭೂ ಆದಾಯ ಅವರದಾಗಿತ್ತು ಎಂದರು.
ಸಾಲಾರಜಂಗ್, ಫಕ್ರುಲ್ಮುಲ್ಕ್, ಖಾನ್ಖಾನಾನ್, ಮಹಾರಾಜಾ ಕಿಶನ್ ಪ್ರಸಾದ್, ರಾಜೆ ರಾಯರಾಣಾ, ರಾಜಾ ಧರಮಕರಣ ಮಾಥೂರ್ ಮತ್ತು ನವಾಬ್ ಶೌಕತ್ ಸೇರಿದಂತೆ 19 ಜನ ದೊಡ್ಡ ಜಹಗೀರದಾರರು ಎರಡು ಕೋಟಿ ಎಕರೆ ಜಮೀನು ಹೊಂದಿದ್ದರು. ನಿಜಾಮರ ಕಾಲದ ಪ್ರಸಿದ್ಧ ಜಹಗೀರದಾರರಾಗಿದ್ದ ಇವರೆಲ್ಲ ಮೂರು ಕೋಟಿಗೂ ಅಧಿಕ ಉತ್ಪನ್ನ ಹೊಂದಿದ್ದರು. ಈ ಜಹಗೀರದಾರರು ಐದು ಸಾವಿರ ಹಳ್ಳಿಗಳನ್ನು ನಿಯಂತ್ರಿಸುತ್ತಿದ್ದರು ಎಂದು ತಿಳಿಸಿದರು.
ಇವಾಜ್ ಖಾನ್ ರಿಂದ ಮೀರ್ ಲಿಯಾಕ್ ಅಲಿಯವರೆಗೆ 42 ಜನರು ನಿಜಾಮ ಸಂಸ್ಥಾನದ ಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಭಾರತೀಯ ಸಂಸ್ಥಾನಿಕರನ್ನು ನಿಯಂತ್ರಿಸಲು ಬ್ರಿಟಿಷ ಸರ್ಕಾರವು ತನ್ನ ಹಿರಿಯ ಆಡಳಿತಗಾರರನ್ನು ಸ್ಥಾನಿಕ ಅಧಿಕಾರಿಗಳನಾಗಿ ನೇಮಕ ಮಾಡುತ್ತಿತ್ತು. ಆ ಮೂಲಕ ಅವರು ಸ್ಥಳೀಯ ರಾಜಪ್ರಭುತ್ವವನ್ನು ನಿಯಂತ್ರಿಸುತ್ತಿದ್ದರು. ರಾಜಪ್ರಭುತ್ವ ಸೇರಿದಂತೆ ಸ್ಥಳೀಯ ಆಡಳಿತಗಾರರಿಗೆ ಸ್ಥಾನಿಕಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಆಡಳಿತಗಾರರ ಚಟುವಟಿಕೆಗಳ ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡುತ್ತಿದ್ದರು. ಕ್ಯಾಪ್ಟನ್ ಕೆನ್ನವೇಯಿಂದ ಪ್ರಾರಂಭವಾದ ಈ ಪರಂಪರೆಯು ಸರ್ ಅರ್ಥರ್ ಲೋಥಿಯನ್ ವರೆಗೆ ಮುಂದುವರೆದಿದ್ದು 40ಕ್ಕೂ ಹೆಚ್ಚು ಸಂಸ್ಥಾನಿಕರು ನಿಜಾಮ ಸಂಸ್ಥಾನವನ್ನು, ಇಲ್ಲಿಯ ಜನಸಾಮಾನ್ಯರನ್ನು ನಿಯಂತ್ರಿಸಿದ್ದು ಚರಿತ್ರೆಯಲ್ಲಿ ನಮಗೆ ಕಂಡುಬರುತ್ತದೆ ಎಂದರು.
ಹೈದರಾಬಾದ್ ಸಂಸ್ಥಾನ ಮತ್ತು ಬ್ರಿಟಿಷರ ನಡುವಿನ ಸಂಬಂಧಗಳ ಕುರಿತು ಕನ್ನಡದಲ್ಲಿ ಅಷ್ಟಾಗಿ ಬರಹಗಳು ಬಂದಿಲ್ಲ. ಹಾಗಾಗಿ ಈ ವಿಷಯದ ಮೇಲೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.







