ಕಲಬುರಗಿ | ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ರದ್ದತಿಗೆ ಆಗ್ರಹಿಸಿ ಮೇ 31ರಂದು ಪ್ರತಿಭಟನೆ: ಡಿ.ಜಿ.ಸಾಗರ್

ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವೈಯಕ್ತಿಕವಾಗಿ ನಿಂದಿಸಿದ ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಲೇ ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ರದ್ದುಗೊಳಿಸುವಂತೆ ಆಗ್ರಹಿಸಿ ಇದೇ ಮೇ 31ರಂದು ಬೆಳಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಡಾ.ಡಿ.ಜಿ ಸಾಗರ್ ಹೇಳಿದ್ದಾರೆ.
ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದನವನ್ನು ಚಿಂತಕರ ಚಾವಡಿ ಎಂದು ಹೇಳಲಾಗುತ್ತದೆ, ಅಂತಹ ಸದನದ ವಿರೋಧ ಪಕ್ಷದ ನಾಯಕರಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ನಗರದಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ನಾಯಿ ಎಂದು ಸಂಬೋಧಿಸಿದ್ದಾರೆ. ಇಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಸಚಿವರಿಗೆ ವೈಯಕ್ತಿಕವಾಗಿ ನಿಂದಿಸಿರುವುದು ಅಕ್ಷಮ್ಯ ಅಪರಾಧ. ಅಂತಹ ಸ್ಥಾನದಲ್ಲಿ ಕೂರಿಸಿರುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಮತ್ತು ಅವರ ಕುಟುಂಬವು ಸುದೀರ್ಘ ಕಾಲ ರಾಜಕೀಯ ಮಾಡುತ್ತಾ ಬಂದಿದೆ. ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯದಲ್ಲಿ ದೊಡ್ಡ ಎತ್ತರಕ್ಕೆ ಬೆಳೆದಿದ್ದಾರೆ. ಅದರಲ್ಲಿ ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದನ್ನು ಕಂಡು ಬಿಜೆಪಿಗರಲ್ಲಿ ನಡುಕ ಹುಟ್ಟಿಸಿದೆ, ಹಾಗಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರತಿ ಬಾರಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಠ್ಠಲ್ ದೊಡ್ಡಮನಿ, ರಾಜಕುಮಾರ್ ಕಪನೂರ್, ಪ್ರಕಾಶ್ ಮೂಲಭಾರತಿ, ಮಲ್ಲಪ್ಪ ಹೊಸಮನಿ, ದೇವೇಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ಅಶ್ವಿನ್ ಸಂಕಾ, ಪ್ರಕಾಶ್ ನಾಗನಳ್ಳಿ, ಸುರೇಶ್ ಹಾದಿಮನಿ, ಹಣಮಂತ ಬೋಧನಕರ್, ಗುಂಡಪ್ಪ, ಪವನಕುಮಾರ್ ವಳಕೇರಿ, ದಿಗಂಬರ ಬೆಳಮಗಿ ಸೇರಿದಂತೆ ಮತ್ತಿತರರು ಇದ್ದರು.







