ಕಲಬುರಗಿ | ಖಾಸಗಿ ಶಾಲೆಗಳ ಅವೈಜ್ಞಾನಿಕ ಡೊನೇಷನ್ ಹಾವಳಿ ತಪ್ಪಿಸಲು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ

ಕಲಬುರಗಿ: ಖಾಸಗಿ ಶಾಲೆಗಳ ಅವೈಜ್ಞಾನಿಕ ಡೊನೇಷನ್ ಹಾಗೂ ಶುಲ್ಕ ವಸೂಲಿ ತಡೆಯುವ ಮೂಲಕ ಸರಕಾರಿ ಶಾಲೆಗಳ ರಕ್ಷಣೆಯ ಜೊತೆಗೆ ಪೋಷಕರ ಹಿತರಕ್ಷಣೆಗೆ ಆಗ್ರಹಿಸಿ ಲೋಕ ರಕ್ಷಕ್ ಅಧ್ಯಕ್ಷರಾದ ದಯಾನಂದ ಯಂಕಚಿ ಅವರ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೂರ್ಯಕಾಂತ್ ಮದನೆ ಅವರಿಗೆ ಮನವಿ ಸಲ್ಲಿಸಿದರು.
ಖಾಸಗಿ ಶಾಲೆಗಳು ದಿನೇದಿನೆ ಪ್ರತಿಷ್ಠೆಯ ಮಾನದಂಡ ಎಂಬಂತೆ ಪೋಷಕರಿಂದ ಲಕ್ಷಾಂತರ ರೂ. ಡೊನೇಷನ್ ಹಾಗೂ ಶಾಲಾ ಶುಲ್ಕ ವಸೂಲಿ ಮಾಡುವುದನ್ನು ರೂಢಿಸಿಕೊಂಡಿವೆ. ಗ್ರಾಮೀಣ ಭಾಗ ಒಳಗೊಂಡಂತೆ ಎಲ್ಲಾ ಸರ್ಕಾರಿ ಶಾಲೆಗಳ ಪಕ್ಕದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸ್ವತಃ ರಾಜ್ಯ ಸರ್ಕಾರವೇ ಮುಕ್ತವಾಗಿ ಅನುಮತಿ ನೀಡುತ್ತಿರುವುದು ಸರ್ಕಾರಿ ಶಾಲೆಗಳು ಪೋಷಕರ ದೃಷ್ಟಿಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುವಂತಾಗಿವೆ. ಇದನ್ನು ಬಂಡವಾಳ ಮಾಡಿಕೊಂಡಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಗಟ್ಟಲೇ ಡೊನೇಷನ್ ಹಾಗೂ ಅವೈಜ್ಞಾನಿಕವಾಗಿ ಶಾಲಾ ಶುಲ್ಕ ವಸೂಲಿ ಮಾಡುವುದನ್ನು ಅಕ್ಷರಶಃ ಸಂಪ್ರದಾಯ ಎನ್ನುವಂತೆ ಪಾಲಿಸುತ್ತಾ ಹೊರಟಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶರಣು ಕಲಶೆಟ್ಟಿ, ನಿರಂಜನ್ ಜಹಾಗಿರ್ದಾರ್, ಶ್ರೀಶೈಲ್ ಸೊರಡೆ, ಲಕ್ಷ್ಮಿಕಾಂತ್ ಜೋಳದ, ರಾಜಕುಮಾರ ಭಜಂತ್ರಿ, ಸರ್ವೇಶ್ ವಠರ, ಸಾಜೀದ್ ಅಹ್ಮದ್, ಮಲ್ಲಿನಾಥ್ ಪಾಟೀಲ್, ಸಂದೀಪ್ ರಾಠೋಡ್, ಕಿರಣ್ ಕಾವೇಟಿ, ಪ್ರಮೋದ್ ಚೌದರಿ, ಅಭಿಲಾಷ್ ಪಾಟೀಲ್, ಶಿವಾನಂದ ಬೆಳಮಗಿ, ದಿನೇಶ್ ಜೇವರ್ಗಿ, ಸಿದ್ದು ಸೋನಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





