ಕಲಬುರಗಿ: ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಖಂಡಿಸಿ ಎಸ್‌ಡಿಪಿಐಯಿಂದ ಪ್ರತಿಭಟನೆ

ಕಲಬುರಗಿ: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಹೇಳಿಕೆ ಖಂಡಿಸಿ ಎಸ್‌ಡಿಪಿಐ ಕಲಬುರಗಿ ಜಿಲ್ಲಾ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮುಸ್ಲಿಮರಿಗೆ ಬಗರ್ ಹುಕುಂ ಅಡಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಭಟ್ಕಳದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರೂ ಗೋಸಾಗಣೆ ಮಾಡುವ ಮುಸ್ಲಿಮರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹೊಡೆಯಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಶಾಸಕರ ಮನಸ್ಥಿತಿ, ಸಂಘ ಪರಿವಾರ ನಾಯಕರ ಮುಸ್ಲಿಂ ದ್ವೇಷವನ್ನು ಪೈಪೋಟಿ ನಡೆಸುವಂತಿದೆ' ಎಂದು ಎಂದು ಜಿಲ್ಲಾಧ್ಯಕ್ಷ ಮೊಹಮ್ಮದ್ ಖಾಜಾ ಮೊಹಿನುದ್ದೀನ್ ಅವರು ಕಿಡಿಕಾರಿದ್ದಾರೆ.
'ಕಳೆದ ಕೆಲವು ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿ ಅಧಿಕಾರದ ಗದ್ದುಗೆ ಏರಲು ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಮುಸ್ಲಿಂ ಸಮುದಾಯಕ್ಕೆ ತನ್ನ ಶಾಸಕರೇ ಅವಮಾನ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಳಿದ ಸಚಿವರು ಚಕಾರ ಎತ್ತುತ್ತಿಲ್ಲ. ಇಂತಹ ನಾಯಕರಿಂದ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮೊಹಮ್ಮದ್ ಖಾಜಾ ಮೊಹಿನುದ್ದೀನ್, ಉಪಾಧ್ಯಕ್ಷ ಮೊಹಮ್ಮದ್ ಮಕ್ಬೂಲ್, ಪ್ರಧಾನ ಕಾರ್ಯದರ್ಶಿ ರಿಜ್ವಾನ್ ಅಹ್ಮದ್, ಅಬ್ದುಲ್ ರಹೀಂ ಪಟೇಲ್, ಇಬ್ರಾಹಿಂ ಪಟೇಲ್, ಗೌಸ್ ಸೇರಿದಂತೆ ಹಲವರಿದ್ದರು.







