ಕಲಬುರಗಿ: 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಮಹಿಳಾ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ನಿರ್ಧಾರ

ವಿಜಯಕುಮಾರ ಪಾಟೀಲ ತೇಗಲತಿಪ್ಪಿ
ಕಲಬುರಗಿ: ಇಂದಿನ ಹೊಸ ಪೀಳಿಗೆಯು ಕನ್ನಡ ಸಾಹಿತ್ಯ ಪ್ರವೇಶ ಮಾಡುವ ಮೂಲಕ ಹೊಸ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಬೇಕೆಂಬ ಆಶಯದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ 20 ಮತ್ತು 21 ರಂದು ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಪುಣ್ಯ ನೆಲದಲ್ಲಿ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ. ನಾಡು-ನುಡಿ, ನೆಲ-ಜಲ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ ಸಾಹಿತಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಲೇಖಕರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ಬರಲಾಗಿದೆ ಎಂದರು.
ಈ ಬಾರಿ ಮಹಿಳೆಯರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪರಿಷತ್ತಿನ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಫೆ. 20 ಮತ್ತು 21 ರಂದು ನಡೆಯುವ ಸಮ್ಮೇಳನಕ್ಕಾಗಿ ಸಕಲ ಸಿದ್ಧತೆಗಳು ಕೈಗೊಳ್ಳಲಾಗುತ್ತಿದೆ. ಪ್ರಚಲಿತ ವಿದ್ಯಮಾನಗಳ ಕುರಿತು ವಿಚಾರಗೋಷ್ಠಿಗಳು, ಸಂವಾದ, ಸಾಧಕರಿಗೆ ಸತ್ಕಾರ ಹೀಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕನ್ನಡ ಭವನ ಪ್ರಾಂಗಣದಲ್ಲಿ ಪುಸ್ತಕ ಮಳಿಗೆಗೆಳ ಸ್ಥಾಪನೆಗೆ ಅವಕಾಶ ನೀಡುವುದು ಸೇರಿ ಅನೇಕ ವಿಶೇಷತೆಗಳಿಗೆ ಸಮ್ಮೇಳನ ಸಾಕ್ಷೀಕರಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಸಭೆಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಶಿವಾನಂದ ಪೂಜಾರಿ, ಸುನೀಲ ಇಟಗಿ, ರಮೇಶ ಡಿ ಬಡಿಗೇರ, ಧರ್ಮರಾಜ ಜವಳಿ, ಡಾ. ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಜಿ ಬಾಳಿ, ವಿನೋದಕುಮಾರ ಜೆ.ಎಸ್., ದಿನೇಶ ಮದಕರಿ, ತಾರಾಚಂದ್ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಸಮ್ಮೇಳನದ ಯಶಸ್ವಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು.