ಕಲಬುರಗಿ | ತೊಗರಿ ಬೆಳೆ ಪರಿಹಾರಕ್ಕಾಗಿ 800 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹ
ಬೆಂಬಲ ಬೆಲೆ ಮತ್ತಿತರ ಬೇಡಿಕೆ ಈಡೇರಿಕೆಗಾಗಿ ರೈತರಿಂದ ಬೃಹತ್ ಪ್ರತಿಭಟನೆ

ಕಲಬುರಗಿ : ಏಷ್ಯಾದಲ್ಲೇ ಅತಿ ಹೆಚ್ಚು ಮತ್ತು ಉತ್ಕೃಷ್ಟವಾದ ತೊಗರಿ ಬೆಳೆ ಬೆಳೆಯುವ ರೈತರ ಪಾಡು ಈ ಬಾರಿ ಬೀದಿ ಪಾಲಾಗಿದೆ. ಕೂಡಲೇ ಸರಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, 800 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಹೋರಾಟ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘಟನೆಯ ರೈತ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿರುವ ನೂರಾರು ರೈತರು, ತಮ್ಮ ಎತ್ತಿನ ಬಂಡಿ, ಟ್ರಾಕ್ಟರ್ ಗಳನ್ನು ಕಟ್ಟಿಕೊಂಡು ನಗರದ ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಬೃಹತ್ ಪ್ರತಿಭಟನೆ ನಡೆಸುವುದರ ಮೂಲಕ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಖಾಸಗಿ ಬೆಳೆ ವಿಮೆಯಿಂದ ರೈತರಿಗೆ ತಾರತಮ್ಯ :
ಖಾಸಗಿ ಬೆಳೆ ವಿಮೆಯಿಂದ ರೈತರಿಗೆ ತಾರತಮ್ಯವಾಗುತ್ತಿದೆ. ಇದಕ್ಕೆ ಖುದ್ದು ರಾಜ್ಯ ಸರಕಾರವೇ ಸಂಪೂರ್ಣ ವಿಮೆ ಮಾಡಿಸಬೇಕು, ಕಲಬುರಗಿ ಜಿಲ್ಲೆಯ ಬೆಳೆಗಾರರಿಗೆ GI ಟ್ಯಾಗ್ ಪಹಣಿ ಇದ್ದವರಿಗೆ ರೈತರಿಗೆ ಮಾನ್ಯತೆ ನೀಡಬೇಕು, ತೊಗರಿ ಬೆಳೆಗೆ 10,000 ರೂ. ಕನಿಷ್ಠ ಬೆಂಬಲ ಬೆಲೆ ನೀಡಬೇಕು, ಮುಂದಿನ ವರ್ಷ ನೆಟೆ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.
ಪ್ರಸಕ್ತ ಹಂಗಾಮಿನಲ್ಲಿ 6.6 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದ್ದು, ಇದರಲ್ಲಿ 1,82,963 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ನೆಟೆರೋಗ, ಕಳಪೆ ಬೀಜ ಮತ್ತು ತೇವಾಂಶ ಕೊರತೆಯಿಂದ ಹಾನಿಯಾಗಿರುತ್ತದೆ ಎಂದು ಕೃಷಿ ನಿರ್ದೇಶಕರು ಕಲಬುರಗಿ ಇವರು ಸರಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಆದರೆ ವಾಸ್ತವದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ನಾಶವಾಗಿದ್ದು, ರೈತರು ಆತ್ಮಹತ್ಯೆಯಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಡ ಹೇರಿದರು.
ರೈತ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ದಯಾನಂದ ಪಾಟೀಲ, ಬಸವರಾಜ ಇಂಗಿನ, ಚಂದ್ರಶೇಖರ ಹಿರೇಮಠ, ಸಿದ್ರಾಮಪ್ಪ ಪಾಟೀಲ ದಂಗಾಪೂರ, ಸುರೇಶ ಸಜ್ಜನ, ಮಲ್ಲಣ್ಣ, ಆದಿನಾಥ ಹೀರಾ, ಮಲ್ಲಣ್ಣ ಕೋಳಕುರ, ಹಣಮಂತರಾವ ಹೂಗಾರ, ಮಹೇಶ ಪಾಟೀಲ, ಗಿರೀಶ ಇನಾಂದಾರ, ಸುರೇಶ್ ಪಾಟೀಲ್ ನೆದಲಗಿ ಸೇರಿದಂತೆ ಮಠಾಧೀಶರು, ಪ್ರಗತಿಪರ ಚಿಂತಕರು, ಎಪಿಎಂಸಿ ವರ್ತಕರು, ಕಾರ್ಮಿಕರು, ನಿವೃತ್ತ ಸೈನಿಕರು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ನೂರಾರು ಸಂಖ್ಯೆಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







