ಕಲಬುರಗಿ | ಆಳಂದ ವಾರ್ಡ್‌ಗಳಲ್ಲಿ ಮೂಲಸೌಲಭ್ಯಗಳ ನಿರ್ಲಕ್ಷ್ಯ ಖಂಡಿಸಿ ಅಖಿಲ ಕರ್ನಾಟಕ ದಲಿತ ಸೇನೆ ಧರಣಿ

ಕಲಬುರಗಿ: ಆಳಂದ ಪಟ್ಟಣದ ಪುರಸಭೆ ವಾರ್ಡ್ ಸಂಖ್ಯೆ 25 ಹಾಗೂ 26ರಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಸಾರ್ವಜನಿಕರು, ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಗುರುವಾರ ಅಖಿಲ ಕರ್ನಾಟಕ ದಲಿತ ಸೇನೆ ತಾಲೂಕು ಸಮಿತಿಯ ಕಾರ್ಯಕರ್ತರು ರಾಜಾಧ್ಯಕ್ಷ ದತ್ತಾತ್ರೇಯ ಕುಡಕಿ ನೇತೃತ್ವದಲ್ಲಿ ಪುರಸಭೆ ಆವರಣದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಯಿತು.
ಧರಣಿಯಲ್ಲಿ ಅಖಿಲ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ ಅವರು ಮಾತನಾಡಿ, ವಾರ್ಡ್ಗಳಲ್ಲಿ ಬರುವ ಆಶ್ರಯ ಕಾಲೋನಿ, ಶಕ್ತಿನಗರ, ಲಕ್ಷ್ಮೀನಗರ, ಸಿದ್ದನಗರ, ವೆಂಕಟೇಶನಗರ, ಮರಗಮ್ಮ ದೇವಿನಗರ ಸೇರಿದಂತೆ ಈ ವಾರ್ಡ್ಗಳಲ್ಲಿನ ಹಲವು ಪ್ರದೇಶಗಳಲ್ಲಿ ಸಿಸಿ ರಸ್ತೆ, ಒಳಚರಂಡಿ, ವಿದ್ಯುತ್ ದೀಪ, ಶುದ್ಧ ಕುಡಿಯುವ ನೀರು, ಒಳಚರಂಡಿಗಳ ಮೇಲೆ ಸ್ಲಾಬ್, ಮತ್ತು ರಸ್ತೆಯ ಕೆಸರು ತೆರವುಗೊಳಿಸಿ ಮುರುಮ್ ಹಾಕುವಂತಹ ಮೂಲಭೂತ ಸೌಕರ್ಯಗಳ ಒದಗಿಸುವಂತೆ ಬಡಾವಣೆಯ ನಿವಾಸಿಗಳು ಪುರಸಭೆ ಆಡಳಿತ ಗಮನಕ್ಕೆ ತಂದರೂ, ಯಾವುದೇ ಕ್ರಮಕೈಗೊಂಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ನಿಕಟಪೂರ್ವ ಅಧ್ಯಕ್ಷ ಬಾಬುರಾವ್ ಅರುಣೋದಯ, ಗೌರವ ಅಧ್ಯಕ್ಷ ಆನಂದರಾಯ ಗಾಯಕವಾಡ, ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆ, ತಾಲೂಕು ಅಧ್ಯಕ್ಷ ಭೋಜರಾಜ ಜುಭ್ರೆ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಶಿವಪುತ್ರ ಆರ್ಯ, ಅಮರ ಜಿಡಗಾ, ಲೋಕೇಶ ಜಿಂಗೆ, ಸುಧೀಪ ಮೋರೆ, ಸಂತೋಷ ಸಿಂಗೆ, ಪಪ್ಪು ಕೋರೆ ಸೇರಿದಂತೆ ಬಡಾವಣೆಯ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿದ್ದರು.
ಧರಣಿ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರು ಬೇಡಿಕೆಯ ಮನವಿ ಸ್ವೀಕರಿಸಿ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಬೇಡಿಕೆ ಈಡೇರಿಕೆಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಧರಣಿ ಹಿಂದಕ್ಕೆ ಪಡೆಯಲಾಯಿತು.







