ಕಲಬುರಗಿ | ಅಂಬಿಗರ ಚೌಡಯ್ಯ ಮೂರ್ತಿ ಭಗ್ನ : ಕೋಲಿ ಸಮಾಜದಿಂದ ರಸ್ತೆ ತಡೆದು ಪ್ರತಿಭಟನೆ

ಕಲಬುರಗಿ : ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿನ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿರುವದನ್ನು ಖಂಡಿಸಿ ಶುಕ್ರವಾರ ಕೋಲಿ ಸಮಾಜದ ವತಿಯಿಂದ ಭಂಕೂರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು, ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
12 ನೇ ಶತಮಾನದ ಶರಣರಾದ ಅಂಬಿಗರ ಚೌಡಯ್ಯನವರು ಸಾಮಾಜಿಕ ಹರಿಕಾರರು. ಅವರು ಸಮಾಜದ ಓರೆಕೋರೆಗಳನ್ನು ತಿದ್ದುವ ಮೂಲಕ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದವರು. ಅಂತಹ ಮಹಾನ್ ಶರಣರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಯಾರು ಸಹಿಸುವುದಿಲ್ಲ. ಇದೊಂದು ಘೋರ ಕೃತ್ಯ. ಇದು ಕೋಲಿ ಸಮಾಜದ ಸ್ವಾಭಿಮಾನವನ್ನು ಕೆರಳಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ವಿಕೃತಿ ಕಾರ್ಯವನ್ನು ಮಾಡಿ ಕಿಡಿಗೇಡಿಗಳು ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡಿದ್ದಾರೆ. ಇಂತಹ ವಿಕೃತ ಮನಸ್ಸಿನ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ, ಗಡಿಪಾರು ಮಾಡಬೇಕು. ಅಲ್ಲದೇ ಚೌಡಯ್ಯನವರ ಮೂರ್ತಿಯನ್ನು ಪುನರ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಾಷ್ಟ್ರೀಯ ಹೆದ್ದಾರಿ ತಡೆದು, ರಾಜ್ಯ ಸರ್ಕಾರ ಮತ್ತು ಕಿಡಿಗೇಡಿಗಳ ವಿರುದ್ಧ ದಿಕ್ಕಾರ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕಾಧ್ಯಕ್ಷ ಶಿವಕುಮಾರ ತಳವಾರ ಅವರು ಗ್ರೇಡ್ -2 ತಹಶೀಲ್ದಾರ ಗುರುರಾಜ ಸಂಗಾವಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುತ್ತಗಾ ಗ್ರಾಮ ಕೋಲಿ ಸಮಾಜ ಅಧ್ಯಕ್ಷ ಶಿವಕುಮಾರ ನಾಟೀಕಾರ, ಶರಣಪ್ಪ ತಳವಾರ, ಅವಣ್ಣ ಮ್ಯಾಕೇರಿ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಶರಣಪ್ಪ ಸಣಮೋ, ಪರಮಾನಂದ ಯಲಗೋಡ, ದೇವಿಂದ್ರ ಕಾರೋಳಿ, ಈರಣ್ಣ ಗುಡೂರ, ನಿಂಗಣ್ಣ ನಂದಿಹಳ್ಳಿ, ಮಲ್ಲಿಕಾರ್ಜನ ಸಿರಗೊಂಡ, ಡಾ.ಮಹೇಂದ್ರ ಕೋರಿ, ಭೀಮಯ್ಯ ಗುತ್ತೆದಾರ, ವಿಜಯಕುಮಾರ ನಾಟೀಕಾರ, ಮಂಜುನಾಥ ವಾಲಿಕಾರ, ಮರಲಿಂಗ ಗಂಗಬೊ, ಶರಣು ಹರ್ಲಕಟ್ಟಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.







