ಕಲಬುರಗಿ | ಅಂಗನವಾಡಿ ನಿವೃತ್ತ ನೌಕರರಿಗೆ ಗ್ರಾಚ್ಯುಟಿ ನೀಡಲು ಮನವಿ

ಕಲಬುರಗಿ : 2011 ರಿಂದ 2023 ಮಾರ್ಚ್ ವರೆಗೆ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ 1972ರ ಗ್ರಾಚ್ಯುಟಿ ಮೊತ್ತವನ್ನು ನೀಡುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಾಜ್ಯ ಸಮಿತಿ ವತಿಯಿಂದ ಅಫಜಲಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯಧ್ಯಕ್ಷೆ ಶಾಂತಾ ಗಂಟೆ ಮಾತನಾಡಿ, 1975ರ ಅ.2ರಂದು ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಂದು ಶಿಶುವಿನಂತೆ ಇತ್ತು. ಇಂದು ಈ ಯೋಜನೆ ಹೆಮ್ಮರವಾಗಿ ಬೆಳೆದು ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕೂಡ ಕಾರಣವಾದ ಈ ಯೋಜನೆಗೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಶ್ರಮ ಅರ್ಪಿಸಿದ್ದಾರೆ ಎಂದು ಹೇಳಿದರು.
2022ರ ಏ.25ರಂದು ಸಿವಿಲ್ ಅಪೀಲ್ ನ ಸುಪ್ರೀಂ ಕೋರ್ಟ್ ತೀರ್ಪಿನಂತೆ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕಾಯಿದೆ 1972 ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ತೀರ್ಪಿನ ಅನುಷ್ಠಾನಕ್ಕಾಗಿ 2023ರ ಜನವರಿಯಲ್ಲಿ ನಡೆದ ಚಳುವಳಿಯ ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2 ಫೆಬ್ರವರಿ 2023ರಂದು ಆದೇಶ ಹೊರಡಿಸಿ, 2023ರ ಏಪ್ರಿಲ್‌ನಿಂದ ಗ್ರಾಚ್ಯುಟಿ ಜಾರಿಗೊಳಿಸಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 183 ಕೋಟಿ ರೂ. ಅನುದಾನ ಬಿಡುಗಡೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಹಣಕಾಸು ಇಲಾಖೆ ಇದುವರೆಗೆ ಅನುದಾನ ಬಿಡುಗಡೆ ಮಾಡದಿರುವುದು ವಿಷಾದನೀಯ. ಆದ್ದರಿಂದ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಂತಾ ಗಂಟೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಲಾವತಿ ಅಳಸಂಗಿ, ಪ್ರಧಾನ ಕಾರ್ಯದರ್ಶಿ ಬಿಸ್ಮಿಲ್ಲಾ, ಖಜಾಂಚಿ ಲಲಿತಾ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.







