ಕಲಬುರಗಿ | ಭಗವಾನ್ ಬಿರ್ಸಾ ಮುಂಡಾ ಬಾಲ್ಯದಿಂದಲೇ ಹೋರಾಟದಲ್ಲಿ ತೊಡಗಿದ್ದರು: ರಣೇಂದ್ರ

ಕಲಬುರಗಿ: ಭಗವಾನ್ ಬಿರ್ಸಾ ಮುಂಡಾ ಬಾಲ್ಯದಿಂದಲೇ ಹೋರಾಟದಲ್ಲಿ ತೊಡಗಿದ್ಧರು ಎಂದು ಪ್ರಸಿದ್ಧ ಮಾಜಿ ಐಎಎಸ್ ಅಧಿಕಾರಿ, ರಾಂಚಿಯ ಡಾ.ರಾಮದಯಾಳ್ ಮುಂಡಾ ಬುಡಕಟ್ಟು ಸಂಶೋಧನಾ ಕಲ್ಯಾಣ ಸಂಘ ಸಂಸ್ಥೆ ಮಾಜಿ ನಿರ್ದೇಶಕ ರಣೇಂದ್ರ ಹೇಳಿದ್ದಾರೆ.
ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ “ಭಾರತೀಯ ಸ್ವತಂತ್ರ ಸಂಗ್ರಾಮದಲ್ಲಿ ಬಿರ್ಸಾಮುಂಡ ಮತ್ತು ಇತರ ಆದಿವಾಸಿ ಜನಾಂಗಗಳ ಕೊಡುಗೆ” ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ಭಾರತದ ಇತಿಹಾಸದಲ್ಲಿ ಆದಿವಾಸಿ ಸಮುದಾಯವನ್ನು ಬ್ರಿಟಿಷರ ಕಾಲದ ನಂತರ ಪರಿಗಣಿಸಲಾಗುತ್ತಿದೆ. ಆದರೆ ಇವರ ಇತಿಹಾಸ ಬುದ್ಧ ಮತ್ತು ಅಶೋಕರ ಕಾಲದಿಂದಲೂ ಸಮೃದ್ಧವಾಗಿದೆ. ಸುರೇಶ್ ಕುಮಾರ್ ಸಿಂಗ್ ರವರ, “ದಿ ಡಸ್ಟ್ ಸ್ಟಾರ್ಮ್ ಆಂಡ್ ದಿ ಹ್ಯಾಂಗಿಗ್ ಮಿಸ್ಟ್ : ಎ ಸ್ಟಡಿ ಆಫ್ ಬಿರ್ಸಾ ಮುಂಡಾ ಆಂಡ್ಸ್ ಇಸ್ ಮುಮೆಂಟ್ ಇನ್ ಚೋಟನಾಗಪುರ” ಮುಂಡಾಲಿ ಗೀತೆ ಹಾಗೂ ಮುಂಡಾ ಇತಿಹಾಸವನ್ನು ಪರಿಚಯಿಸುತ್ತದೆ ಎಂದು ಹೇಳಿದರು.
ಸಿಯುಕೆ ಉಪಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, “ನಮ್ಮ ಇಂದಿನ ಸ್ವತಂತ್ರ‍್ಯದ ಸವಿಯಲ್ಲಿ ಬುಟಕಟ್ಟು ಜನಾಂಗದ ಹೋರಾಟ ಮತ್ತು ಕೊಡುಗೆ ಅಡಗಿದೆ. ಅರಣ್ಯದ ಉಳಿವಿಗೆ ಬಿರ್ಸಾ ಮುಂಡಾರ ಕೊಡುಗೆ ಅಪಾರ ವಿಕಸಿತ ಭಾರತ 2047ರ ಮುಖ್ಯ ಧ್ಯೇಯ ಪ್ರತಿಯೊಂದು ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವುದಾಗಿದೆ. ಆದಿವಾಸಿ ಸಮುದಾಯಗಳ ಕೊಡುಗೆಯನ್ನು ಸ್ಮರಿಸುವಂತಾದಾಗಿದೆ ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ನಿಕಾಯದ ಡೀನ್.ಪ್ರೊ.ವಿಕ್ರಮ ವಿಸಾಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ಡೀನ್ ರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರೊ.ಸಂದೀಪ್ ರಣಬಿರ್ ಕರ್ ಸ್ವಾಗತಿಸಿದರು. ಈ ವಿಚಾರ ಸಂಕಿರಣವು ಐಸಿಎಸ್‌ಎಸ್‌ಆರ್ ನವದೆಹಲಿ ಸಹಭಾಗಿತ್ವದಲ್ಲಿ ಎರಡು ದಿನ ನಡೆಯಿತು. ಡಾ.ಭಾವನಾ ನಿರೂಪಿಸಿದರು. ಡಾ.ಗೋವಿಂದ್ ವಂದಿಸಿದರು. ಡಾ.ಸ್ವಪ್ನಿಲ್ ಚಾಪೆಕರ್ ಒಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿದರು.







