ಕಲಬುರಗಿ | ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತದೇಹ ಪತ್ತೆ

ಕಲಬುರಗಿ : ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯ ಆಡಕಿ ಹಳ್ಳದಲ್ಲಿ ಮಹಿಳೆಯೊರ್ವರು ನೀರಿನ ರಭಸಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಮೂರು ದಿನಗಳ ಶೋಧ ಕಾರ್ಯದ ಬಳಿಕ ಮೃತದೇಹ ಪತ್ತೆಯಾಗಿದೆ.
ಮೃತರನ್ನು ರಾಜೋಳ್ಳ (ಕೆ) ಗ್ರಾಮದ ಬಸಮ್ಮ ಮೊಗಲಪ್ಪ ಕುಂಬಾರ (64) ಎಂದು ಗುರುತಿಸಲಾಗಿದೆ.
ಸೋಮವಾರ ಹೊಲಕ್ಕೆ ತೆರಳಿದ್ದ ಬಸಮ್ಮ ಅಂದು ಸಂಜೆವಾದರೂ ಮರಳಿ ಮನೆಗೆ ಬಾರದೇ ಇರುವದರಿಂದ ಅನುಮಾನಗೊಂಡ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದಾರೆ. ಹಳ್ಳದ ಅಂಚಿನಲ್ಲಿ ಮಹಿಳೆಯ ಚಪ್ಪಲಿಗಳು ಬಿದ್ದಿದ್ದು, ಕಾಲು ಜಾರಿ ಹಳ್ಳಕ್ಕೆ ಬಿದ್ದಿರುವ ಶಂಕೆ ಉಂಟಾಗಿತ್ತು. ಆದರೆ, ಮರಳಿ ಬಂದು ದಡ ಸೇರಿರುವ ಹೆಜ್ಜೆ ಗುರುತು ಇರಲಿಲ್ಲ. ನಿರಂತರವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮಾಡಿದ್ದರಿಂದ ಬುಧವಾರ ಆಡಕಿ ಬಳಿಯ ಹಳ್ಳದಲ್ಲಿ ಮಹಿಳೆಯ ಮೃತದೇಹ ದೊರೆತಿದೆ ಎಂದು ತಿಳಿದುಬಂದಿದೆ.
ರಾಜೋಳ್ಳ ( ಕೆ) ಗ್ರಾಮದ ಹಳ್ಳದಿಂದ ಆಡಕಿ ಹಳ್ಳದ ವರೆಗೆ ಮಹಿಳೆಯ ಮೃತದೇಹ ನೀರಿನೊಂದಿಗೆ ಸುಮಾರು 3 ಕಿಮೀ. ವರೆಗೆ ಕೊಚ್ಚಿಕೊಂಡು ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಬಸಪ್ಪ, ಶರಣಯ್ಯ ಗುತ್ತೇದಾರ, ಮಹಿಬೂಬ್, ನರೇಂದ್ರ, ತರುಣ, ನಿಂಗರಾಜ್, ರಿಯಾಝ್ ಶೋಧ ಕಾರ್ಯ ನಡೆಸಿದ್ದರು.
ಘಟನೆ ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.





