ಕಲಬುರಗಿ: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ಪೊಲೀಸರಿಂದ ತಪಾಸಣೆ

ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆ ಕೆಇಬಿ ಕಲ್ಯಾಣ ಮಂಟಪ ಹತ್ತಿರ ಇರುವ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ವರದಿಯಾಗಿದೆ.
ಅಶೋಕ್ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಒಡೆತನದ ಶಾಲೆಗೆ ತಮಿಳು ಭಾಷೆಯಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಾಂಬ್ ಬೆದರಿಕೆ ಹಿನ್ನೆಲೆ ಶಾಲಾ ಸಿಬ್ಬಂದಿ ಮಕ್ಕಳನ್ನು ತರಗತಿಗಳಿಂದ ಹೊರಗಡೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಶಾಲೆಯಲ್ಲಿ ಆರ್ಡಿಎಕ್ಸ್ ಇಟ್ಟು ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಬಂದಿದೆ. ತಮಿಳುನಾಡಿನ ರಾಜಕೀಯ ಪಕ್ಷವೊಂದರ ಹೆಸರು ಇದರಲ್ಲಿ ತಿಳಿಸಲಾಗಿದೆ. ಶಾಲೆಯ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಇದಕ್ಕೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಡಾಗ್ ಸ್ಕ್ವ್ಯಾಡ್, ಬಾಂಬ್ ಪತ್ತೆ ದಳದಿಂದ ಪರಿಶೀಲನೆ ನಡೆಸುತ್ತಿದ್ದಾರೆ.