ಕಲಬುರಗಿ | ನಗರದಲ್ಲಿ ಅತೀ ಹೆಚ್ಚು ನೀರಿನ ಕರ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ನಳದ ಸಂಪರ್ಕ ಕಡಿತ ಅಭಿಯಾನ

ಕಲಬುರಗಿ: ಕಲಬುರಗಿ ನಗರದಲ್ಲಿ ಅನಧೀಕೃತ ಹಾಗೂ ಅತೀ ಹೆಚ್ಚು ನೀರಿನ ಕರ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ನಳ ಸಂಪರ್ಕಗಳನ್ನು ಕಡಿತಗೊಳಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ಕೆ.ಯು.ಡಬ್ಲ್ಯೂ.ಎಸ್.ಎಂ.ಪಿ. ಮತ್ತು ಕೆ.ಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕುಸ್ಸೆಂಫ್) 24*7 ನಿರಂತರ ನೀರು ಸರಬರಾಜು ಯೋಜನೆಯನ್ನು ಕಲಬುರಗಿ ನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕುಡಿಯಲು ಹಾಗೂ ದಿನನಿತ್ಯದ ಬಳಕೆಗಾಗಿ ನಳ ಸಂಪರ್ಕ ಪಡೆದ ಗ್ರಾಹಕರು ಸುಮಾರು ವರ್ಷಗಳಿಂದ ನೀರಿನ ಕರ ಭರಿಸದೇ 69 ಕೋಟಿ ರೂ. ಬಾಕಿ ಉಳಿಸಿಕೊಂಡಿರುತ್ತಾರೆ. ಇದರಿಂದ ವ್ಯವಸ್ಥಿತವಾಗಿ ನೀರು ನಿರ್ವಹಣೆಯನ್ನು ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ನಗರದಲ್ಲಿ ನಳ ಸಂಪರ್ಕ ಹೊಂದಿದ ಗ್ರಾಹಕರು ನೀರಿನ ಕರ ಬಾಕಿ ಉಳಿಸಿಕೊಳ್ಳದೆ, ನಿಯಮಿತವಾಗಿ ನೀರಿನ ಕರವನ್ನು ತುಂಬಿ ಮಹಾನಗರಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕು.
ಈ ಬಾಕಿ ಮೊತ್ತವನ್ನು ವಸೂಲಿ ಮಾಡಲು ಕಳೆದ ಎರಡು ವರ್ಷದಿಂದ ಕಟುಬಾಕಿದಾರರ ಮನೆಗೆ ಭೇಟಿ ನೀಡಿ ತಿಳುವಳಿಕೆ ನೀಡಿದ್ದರೂ, ಸಹ ಗ್ರಾಹಕರು ನೀರಿನ ಕರ ತುಂಬಲು ಮುಂದೆ ಬರುತ್ತಿಲ್ಲ. ಹಾಗಾಗಿ ಇಂತಹ ಗ್ರಾಹಕರ ನಳ ಜೋಡಣೆಯನ್ನು ಕಡಿತಗೊಳಿಸಲು ಕೆ.ಯು.ಐ.ಡಿ.ಎಫ್.ಸಿ. (KUIDFC) ಯಿಂದ 5 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಪ್ರತಿದಿನ ಕಟುಬಾಕಿದಾರರ ಮನೆಗೆ ತೆರಳಿ, ಬಾಕಿ ನೀರಿನ ಕರ ತುಂಬುವಂತೆ ಮನವೊಲಿಸಲಾಗುತ್ತಿದೆ. ಪೂರ್ಣ ಪ್ರಮಾಣದ ಬಾಕಿಯನ್ನು ತುಂಬಲು ಸಾಧ್ಯವಿಲ್ಲದ ಪಕ್ಷದಲ್ಲಿ ಕಂತಿನ ರೂಪದಲ್ಲಿ ತುಂಬುವಂತೆ ತಿಳಿಸಲಾಗುತ್ತಿದೆ. ಒಂದು ವೇಳೆ ತಿಳಿವಳಿಕೆಯ ನಂತರವೂ ಗ್ರಾಹಕರು ಬಾಕಿ ನೀರಿನ ಮೊತ್ತವನ್ನು ತುಂಬದಿದ್ದಲ್ಲಿ ಅಂಥವರ ನಳ ಜೋಡಣೆಯನ್ನು ಕಡಿತಗೊಳಿಸಲಾಗುತ್ತದೆ.
ನೀರಿನ ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರ ದೂರವಾಣಿ ಸಂಖ್ಯೆ 18004258247ಗೆ ಸಂಪರ್ಕಿಸಲು ಕೋರಲಾಗಿದೆ.







