ಕಲಬುರಗಿ | ಮಾನಸಿಕ ಖಿನ್ನತೆಗೆ ಒಳಗಾಗದಂತೆ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಿ: ಡಿ.ಸಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ: ಹದಿಹರೆಯದ ವಯಸ್ಸಿನ ಮಕ್ಕಳು ಇತ್ತೀಚೆಗೆ ಸಣ್ಣ-ಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರಾದೃಷ್ಟಕರವಾಗಿದ್ದು, ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹೋಗಲಾಡಿಸಲು ಶಿಕ್ಷಣ ಸಂಸ್ಥೆಗಳು ಮಾನಸಿಕ ತಜ್ಞರ ಸಹಾಯ ಪಡೆದು ಮುಂದಿನ ಒಂದು ತಿಂಗಳಲ್ಲಿ ಆಪ್ತ ಸಮಾಲೋಚನೆ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ಸೋಮವಾರ ತಮ್ಮ ಕಚೇರಿಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಯೋಗ ಕ್ಷೇಮ ಖಾತ್ರಿಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ 15 ಅಂಶಗಳ ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಪ್ರತಿ ಶಾಲೆ, ವಸತಿ ನಿಲಯ, ವಸತಿ ಶಾಲೆ, ಕಾಲೇಜುಗಳಲ್ಲಿ ಮಕ್ಕಳ ಮಾನಸಿಕ ಒತ್ತಡದಿಂದ ಹೊರಬರಲು ವಿನೂತನ ಚಟುವಟಿಕೆಗಳೊಂದಿಗೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಶಾಲೆ-ಕಾಲೇಜುಗಳಲ್ಲಿ ರ‍್ಯಾಗಿಂಗ್ ಆಗದಂತೆ ಎಚ್ಚರ ವಹಿಸಬೇಕು. ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಮಕ್ಕಳು ಅಪಹಾಸ್ಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಲೆ ಮತ್ತು ಶಿಕ್ಷಕರದ್ದಾಗಿದೆ. ಪ್ರತಿ ಶಾಲೆಯಲ್ಲಿ ಒಬ್ಬ ಮಾನಸಿಕ ತಜ್ಞ/ ಮನ ಶಾಸ್ತ್ರಜ್ಞ ಅಥವಾ ಸಾಮಾಜಿಕ ಕಾರ್ಯಕರ್ತರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು ಎಂದ ಅವರು, ಒಟ್ಟಾರೆಯಾಗಿ, ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ಪರಿಸರ ಒದಗಿಸುವುದರ ಜೊತೆಗೆ ಮಕ್ಕಳಲ್ಲಿ ಕೀಳರಿಮೆ ಮನೋಭಾವನೆ ಹೋಗಲಾಡಿಸಬೇಕು ಎಂದರು.
ಇತ್ತೀಚೆಗೆ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೆ, ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪಾಲಕ-ಪೋಷಕರು ಬುದ್ದಿವಾದ ಹೇಳಿದರೆ ಮಕ್ಕಳು ಅದನ್ನು ಕೇಳುವ ವ್ಯವದಾನ, ಸಂಯಮ ಇಲ್ಲದೆ ಜೀವನವನ್ನೆ ಕಳೆದುಕೊಳ್ಳುವಂತಹ ಕೆಟ್ಟ ನಿರ್ಧಾರಕ್ಕೆ ಬಲಿಯಾಗುತ್ತಿದ್ದು, ಇದರಿಂದ ಅವರನ್ನು ಹೊರತಂದು ಅವರಲ್ಲಿ ಬೌದ್ಧಿಕ ಶಕ್ತಿ, ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ ಅಗತ್ಯವಿದೆ. ಅಂಕದಿಂದಲೆ ಬದುಕಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಳ್ಳಬೇಕಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜು, ವಸತಿ ನಿಲಯಗಳಲ್ಲಿ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಡಿ.ಸಿ. ನಿರ್ದೇಶನ ನೀಡಿದರು.
ಸಭೆಯಲ್ಲಿ ಡಿ.ಡಿ.ಪಿ.ಐ. ಸೂರ್ಯಕಾಂತ ಕದಮ್, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋಮಶೇಖರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ್ ದೌಲಾ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು







