ಕಲಬುರಗಿ | ಶಿಕ್ಷಣ ಕ್ಷೇತ್ರದ ಸುಧಾರಣೆಗೆ 350 ಹೊಸ ಕೆಪಿಎಸ್ ಶಾಲೆಗಳ ನಿರ್ಮಾಣ : ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಮತ್ತು ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪ್ರದೇಶದಾದ್ಯಂತ ಪ್ರಸಕ್ತ 2025-26 ಮತ್ತು ಮುಂದಿನ 2026-27ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 150 ಮತ್ತು ಮಂಡಳಿಯಿಂದ 200 ಸೇರಿ ಒಟ್ಟಾರೆ 350 ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣವಾಗಲಿವೆ ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.
ನಗರದಲ್ಲಿರುವ ಮಂಡಳಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಸೆ.4 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಾದ್ಯಂತ ಏಶಿಯನ್ ಡೆವಲಪ್ಮೆಂಟ್ ಫಂಡ್ ಅನುದಾನದಲ್ಲಿ 500 ಕೆ.ಪಿ.ಎಸ್. ಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದರಲ್ಲಿ ಕಲ್ಯಾಣ ಭಾಗಕ್ಕೆ 150 ಶಾಲೆ ನೀಡುವುದಾಗಿ ಸಿ.ಎಂ. ಮತ್ತು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಇದರ ಜೊತೆಗೆ ಮಂಡಳಿಯಿಂದ 200 ಶಾಲೆ ನಿರ್ಮಿಸಲಾಗುತ್ತದೆ ಎಂದರು.
ಪ್ರಸ್ತುತ ರಾಜ್ಯದಾದ್ಯಂತ 300 ಕೆ.ಪಿ.ಎಸ್. ಶಾಲೆ ಇದ್ದು, ಇದರಲ್ಲಿ ಕಲ್ಯಾಣ ಭಾಗದಲ್ಲಿರುವುದು ಕೇವಲ 60 ಮಾತ್ರ. ಸಕಲ ಮೌಲಸೌಕರ್ಯ ಜೊತೆಗೆ ಖಾಸಗಿ ಶಾಲೆಗೂ ಮೀರಿ ಸೌಲಭ್ಯಗಳನ್ನೊಳಗೊಂಡ ಎಲ್.ಕೆ.ಜಿ. ಯಿಂದ ಪಿ.ಯು.ಸಿ ವರೆಗಿನ ಶಾಲೆ ಇದಾಗಲಿದ್ದು, ಖಾಸಗಿಯಂತೆ ಮಕ್ಕಲಿಗೆ ಕರೆದುಕೊಂಡು ಹೋಗಲು ಬಸ್ ಸೇವೆ ಸಹ ಇರಲಿದೆ. 3 ರಿಂದ 5 ಎಕರೆ ಪ್ರದೇಶದಲ್ಲಿ ಪ್ರತಿ ಎರಡು ಗ್ರಾಮ ಪಂಚಾಯತಿಗೆ ಅಂತರದಲ್ಲಿ ನಿರ್ಮಾಣವಾಗುವ ಪ್ರತಿ ಶಾಲೆಗೆ 3 ರಿಂದ 5 ಕೋಟಿ ರೂ. ಖರ್ಚಾಗಲಿದೆ ಎಂದರು.
ಇನ್ನು 2023-24 ಮತ್ತು 2024-25ನೇ ಆರ್ಥಿಕ ವರ್ಷವನ್ನು ಶೈಕ್ಷಣಿಕ ವರ್ಷವೆಂದು ಘೋಷಿಸಿ ಅಕ್ಷರ ಆವಿಷ್ಕಾರ ಕಾರ್ಯಕ್ರಮದಡಿ ಶೇ.25ರಷ್ಟು ಅನುದಾನ ಮೀಸಲಿಡಲಾಗಿತ್ತು. ಇದನ್ನು ಮುಂದಿನ ಮೂರು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಎಂದರು.
ಎಸೆಸೆಲ್ಸಿ ಫಲಿತಾಂಶ ಸುಧಾರಿಸಲು 8-10 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾಸರೆ ಪುಸ್ತಕ ಒದಗಿಸಲು ಮಂಡಳಿಯಿಂದ 7.5 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇನ್ನು ಪ್ರೊ.ಛಾಯಾ ದೇಗಾಂವಕರ್ ಅಧ್ಯಕ್ಷತೆಯ ಶಿಕ್ಷಣ ತಜ್ಞರ ಸಮಿತಿಗೆ ಅಂತಿಮ ವರದಿ ಮುನ್ನ ಮಧ್ಯಂತರ ವರದಿ ನೀಡಲು ತಿಳಿಸಲಾಗಿದೆ. ವರದಿ ಆಧಾರದ ಮೇಲೆ ಇತರೆ ಕಾರ್ಯಕ್ರಮಗಳು ಸಹ ಪ್ರಸಕ್ತ ಸಾಲಿನಿಂದಲೆ ಹಮ್ಮಿಕೊಳ್ಳಲಾಗುವುದು ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.
ಸೆ.16ಕ್ಕೆ ಸಿ.ಎಂ. ಸಿದ್ದರಾಮಯ್ಯ ಆಗಮನ:
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.16ರ ಸಂಜೆ ವಿಶೇಷ ವಿಮಾನದ ಮೂಲಕ ಕಲಬುರಗಿಗೆ ಆಗಮಿಸಲಿದ್ದಾರೆ. ಸೆ.17ರಂದು ಪ್ರತಿ ವರ್ಷದಂತೆ ಬೆಳಗ್ಗೆ ಇಲ್ಲಿನ ತಿಮ್ಮಾಪುರಿ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು.
ಉತ್ಸವದ ಅಂಗವಾಗಿ ಸೆ.16 ರಂದು ಬೆಳಿಗ್ಗೆ ವಾಕ್ ಥಾನ್ ಮತ್ತು ಸಂಜೆ ಪಿ.ಡಿ.ಎ ಕಾಲೇಜಿನಲ್ಲಿ ವಸ್ತು ಪ್ರದರ್ಶನ ಮಂಡಳಿಯಿಂದ ಆಯೋಜಿಸಿದೆ ಎಂದರು.
ಮಂಡಳಿಯಿಂದ 6,224 ಕೋಟಿ ರೂ. ಖರ್ಚು :
ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಕಳೆದ ಮೂರು ಅರ್ಥಿಕ ಸಾಲಿನಲ್ಲಿ ರಾಜ್ಯ ಸರ್ಕಾರ 13,000 ಕೋಟಿ ರೂ. ಅನುದಾನ ಘೋಷಿಸಿದೆ. ಇದರಲ್ಲಿ 8,000 ಕೋಟಿ ರೂ. ಗಳ ಕ್ರಿಯಾ ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ. ಮಂಡಳಿ ಅನುದಾನ ಖರ್ಚು ಮಾಡುತ್ತಿಲ್ಲ ಎಂಬ ಅಪವಾದವಿತ್ತು. ತಾವು ಅಧಿಕಾರ ವಹಿಸಿದ ನಂತರ ಕಳೆದ 27 ತಿಂಗಳ ಅವಧಿಯಲ್ಲಿ ಬಿಡುಗಡೆಯಾದ 8,000 ಕೋಟಿ ರೂ. ಗಳ ಪೈಕಿ 6,224 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ.
-ಡಾ.ಅಜಯ್ ಸಿಂಗ್ ( ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ, ಜೇವರ್ಗಿ ಶಾಸಕ)







