ಕಲಬುರಗಿ | ಸೋಲಾರ್ ಪ್ಲಾಂಟ್ ನಲ್ಲಿ ತಾಮ್ರದ ತಂತಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಕಲಬುರಗಿ: ವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಅದಾನಿ ಸೋಲಾರ್ ಪ್ಲಾಂಟ್ ನಲ್ಲಿ ಅಳವಡಿಸಿದ್ದ 7,000 ಮೀಟರ್ ಉದ್ದದ ಡಿಸಿ ಕೇಬಲ್ ತಾಮ್ರದ ತಂತಿಯನ್ನು ಕಳ್ಳತನ ಮಾಡಿರುವ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಂದಾಜು 2,56,969 ರೂ. ಮೌಲ್ಯದ ತಾಮ್ರದ ತಂತಿ ಕಳುವಾಗಿರುವ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ತೆಲಂಗಾಣ ರಾಜ್ಯದ ವನಪರ್ತಿ ಜಿಲ್ಲೆಯ ಆತ್ಮಕೂರ ಪಟ್ಟಣ ಮೂಲದ ನಾಗೇಶ್ ಪೋಲಾ ಯಲ್ಲಯ್ಯ(35) ಮತ್ತು ರಮೇಶ್ ಯರುಕಲಿ (30) ಬಂಧಿತ ಆರೋಪಿಗಳಾಗಿದ್ದಾರೆ. ಅವರಲ್ಲಿ ಕೃತ್ಯಕ್ಕೆ ಬಳಸಲಾದ ಮಿನಿ ಅಶೋಕ್ ಲೈಲ್ಯಾಂಡ್ ವಾಹನ ಸೇರಿದಂತೆ ಅಂದಾಜು 6,06,969 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನಿಬ್ಬರು ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಪಡೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ ಎಂದು ವಿವರಿಸಿದರು.
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಲವಾರ ಸೀಮಾಂತರದಲ್ಲಿರುವ ಅದಾನಿ ಸೋಲಾರ್ ಪ್ರೈವೇಟ್ ಲಿಮಿಟೆಡ್ 40 ಮೆಗಾ ವ್ಯಾಟ್ ಸೌರ ವಿದ್ಯುತ್ ಸೋಲಾರ್ ಪ್ಲಾಂಟ್ ನಲ್ಲಿ 7 ಸಾವಿರ ಮೀಟರ್ ಉದ್ದದ ಅಂದಾಜು 2,56,969 ರೂ. ಮೌಲ್ಯದ ಡಿಸಿ ಕೇಬಲ್ ತಾಮ್ರದ ತಂತಿ ಕಳುವಾಗಿದೆ ಎಂದು ಪ್ಲಾಂಟಿನ ಮ್ಯಾನೇಜರ್ ಚರಣ್ ಚಂದ್ರಶೇಖರ್ ದೂರು ನೀಡಿದ ಅನ್ವಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಬಲೆ ಬೀಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ್ ತಿಗಣಿ, ಪಿಎಸ್ಐ ತಿರುಮಲೇಶ್ ಸೇರಿದಂತೆ ಠಾಣೆಯ ಸಿಬ್ಬಂದಿಯವರು ಒಳಗೊಂಡ ವಿಶೇಷ ತನಿಖಾ ತಂಡವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಪ್ರಕರಣ ತನಿಖೆಯ ವೇಳೆಯಲ್ಲಿ ಸೇಡಂ ತಾಲ್ಲೂಕಿನ ಕಲಕಂಬ ಸೋಲಾರ್ ಪ್ಲಾಂಟ್ ನಲ್ಲಿಯೂ ಸಹ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಸೋಲಾರ್ ಪ್ಲಾಂಟ್ ಇರುವ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿಕೊಂಡು ಮಾಹಿತಿ ಪಡೆಯುವ ಕಳ್ಳರು, ರಾತ್ರಿ ಪ್ಲಾಂಟಿಗೆ ಅಳವಡಿಸಿದ್ದ ಬೇಲಿಯನ್ನು ಕಟ್ಟರ್ ನಿಂದ ಕತ್ತರಿಸಿ ಪ್ಲಾಂಟಿಗೆ ಪ್ರವೇಶಿಸುತ್ತಿದ್ದರು. ಬಳಿಕ ಡಿಸಿ ಕೇಬಲ್ ತಾಮ್ರದ ತಂತಿಯನ್ನು ಕಳುವು ಮಾಡಿಕೊಂಡು ನಿರ್ಜನ ಪ್ರದೇಶದಲ್ಲಿ ಸುಡುತ್ತಿದ್ದರು. ಸುಟ್ಟ ಬಳಿಕ ಉಳಿದಿರುವ ತಾಮ್ರದ ತಂತಿಯನ್ನು ಮಾರಾಟ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದು ಎಸ್ಪಿ ತಿಳಿಸಿದರು.







