ಕಲಬುರಗಿ | ಕ್ರೂಜರ್-ಬೈಕ್ ಢಿಕ್ಕಿ : ಯುವಕ ಮೃತ್ಯು, ಇಬ್ಬರಿಗೆ ಗಾಯ

ವಿಶಾಲ
ಕಲಬುರಗಿ: ಕ್ರೂಜರ್-ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಚೇಂಗಟಾ ಸಮೀಪದ ಅಡಕಿಮೋಕ ತಾಂಡಾ ಬಳಿ ನಡೆದಿದೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕ್ರೂಜರ್ ಹಾಯಿಸಿ ಕೊಲೆಗೈಯ್ಯಲಾಗಿದೆ ಎಂದು ಮೃತ ಯುವಕನ ಪಾಲಕರು ರಟಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಡಕಿಮೋಕ ತಾಂಡಾದ ವಿಶಾಲ (ಡಿಜೆ ವಿಶಾಲ) ತಂದೆ ಕಿಶನರಾಠೋಡ (22) ಮೃತ ಯುವಕನಾಗಿದ್ದು, ಅನಿತಾಬಾಯಿ ಗಂಡ ಅಂಬು, ಪಾರ್ವತಿಬಾಯಿ ಗಂಡ ಅಂಬು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವಿಶಾಲ ಹಾಗೂ ಅನಿತಾಬಾಯಿ, ಪಾರ್ವತಿಬಾಯಿ ಬೈಕ್ ಮೂಲಕ ಅಡಕಿಮೋಕ ತಾಂಡಾದಿಂದ ಚೇಂಗಟಾಗ್ರಾಮಕ್ಕೆ ತೆರಳುತ್ತಿದ್ದರು. ಇದೇ ತಾಂಡಾದ ನಿವಾಸಿ ಕ್ರೂಜರ್ ಚಾಲಕ ಸಿತಾರಾಮ ರಾಠೋಡ ಎದುರಿಗೆ ಬಂದು ಕ್ರೂಜರ್ ಹಾಯಿಸಿದ್ದಾನೆ ಎಂದು ಮೃತ ವಿಶಾಲ ತಂದೆ ಕಿಶನ ರಾಠೋಡ ಠಾಣೆಗೆ ದೂರು ನೀಡಿದ್ದಾರೆ.
ಗಂಭೀರ ಗಾಯಗೊಂಡ ಅನಿತಾಬಾಯಿ, ಪಾರ್ವತಿಬಾಯಿ ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಟಕಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಅದ್ದೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.







