ಕಲಬುರಗಿ | 'ಫುಲೆ' ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕಿದ್ದು ಖಂಡನೀಯ : ಅರ್ಜುನ ಭದ್ರೆ

ಕಲಬುರಗಿ : ಅನಂತ್ ಮಹಾದೇವನ್ ನಿರ್ದೇಶಿಸಿರುವ 'ಫುಲೆ' ಚಲನಚಿತ್ರದಲ್ಲಿನ ಕೆಲವು ದೃಶ್ಯಗಳು ಬ್ರಾಹ್ಮಣ ಸಮಾಜದ ಒತ್ತಾಯದ ಮೇರೆಗೆ ಕೆಲವು ದೃಶ್ಯ ಹಾಗೂ ಸಂಭಾಷಣೆಗಳಿಗೆ ಕೇಂದ್ರ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿರುವುದು ಖಂಡನೀಯ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದ್ದಾರೆ.
ಬುಧವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಬದಲಾವಣೆಯ ಹರಿಕಾರ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರು ದಾರ್ಶನಿಕ ದಂಪತಿಗಳು. ಈ ದಂಪತಿ ಗಳು ಐವತ್ತು ವರ್ಷಗಳ ಕಾಲ ನಿರಂತರವಾಗಿ ದಲಿತರ, ಹಿಂದುಳಿದ ವರ್ಗಗಳ ತುಳಿತಕ್ಕೆ ಒಳಗಾದ ಸಮುದಾಯದ ನಡುವೆ ಇದ್ದುಕೊಂಡು ಅವರ ಸೇವೆಯನ್ನು ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಜೀವನಾಧಾರಿತ ಚಿತ್ರ ಬಿಡುಗಡೆಯಾಗುತ್ತಿದ್ದು, ಅದನ್ನು ತಡೆ ಹಿಡಿಯುವಲ್ಲಿ ಕಿಡಿಗೇಡಿಗಳಿಂದ ಪ್ರಯತ್ನಗಳು ನಡೆದಿವೆ. ಹಾಗಾಗಿ ಎ.11 ರಂದು ಬಿಡುಗಡೆಯಾಗಬೇಕಿದ್ದ ಫುಲೆ ಚಿತ್ರ ಎ. 25 ರಂದು ಬಿಡುಗಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಫುಲೆ' ಸಿನಿಮಾದಲ್ಲಿ ನಿಜವಾದ ಘಟನೆಗಳ ದೃಶ್ಯಗಳಿವೆ. ಅವುಗಳನ್ನು ತೆಗೆದು ಹಾಕುವ ಸೆನ್ಸಾರ್ ಮಂಡಳಿಯು ಕೂಡಲೇ ನಿಲ್ಲಿಸಬೇಕು. ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕದೆ ಯಥಾವತ್ತಾದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ್, ಮಹೇಶ ಕೋಕಿಲೆ, ಮಾನು ಗುರಿಕಾರ, ಅಜೀಜ್ ಯಾದಗಿರಿ ಸೇರಿದಂತೆ ಇನ್ನಿತರರು ಇದ್ದರು.





