ಕಲಬುರಗಿ| ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪಾರದರ್ಶಕ ತನಿಖೆಗೆ ಅಂಬೇಡ್ಕರ್ ಅಸೋಸಿಯೇಷನ್ ಒತ್ತಾಯ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭೂಗರ್ಭಶಾಸ್ತ್ರ ವಿಭಾಗದ ಐದನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಒಡಿಸ್ಸಾ ಮೂಲದ ದಲಿತ ಸಮುದಾಯದ ವಿದ್ಯಾರ್ಥಿನಿ ಜಯಶ್ರೀ ನಾಯಕ ಅವರ ಆತ್ಮಹತ್ಯೆಯ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಅಂಬೇಡ್ಕರ್ ಸ್ಟೂಡೆಂಟ್ ಅಸೋಷಿಯೇಷನ್ ಅಧ್ಯಕ್ಷೆ ವಿಜಯಲಕ್ಷ್ಮಿ ದೊಡ್ಡಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜಯಶ್ರೀ ನಾಯಕ ಅವರ ಆತ್ಮಹತ್ಯೆಯು ತುಂಬಾ ನೋವಿನ ಸಂಗತಿಯಾಗಿದೆ. ಈ ಪ್ರಕರಣವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಉಂಟುಮಾಡಿ ಭಯಭೀತರನ್ನಾಗಿಸಿದೆ. ಇದಕ್ಕೆ ಸಂಬಂಧಿಸಿದಂತೆ ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಭಿನ್ನಭಿನ್ನ ವರದಿಗಳು ಗೊಂದಲಕ್ಕೀಡುಮಾಡಿ ಹಲವು ಬಗೆಯ ಅನುಮಾನಕ್ಕೆ ಆಸ್ಪದ ನೀಡುವಂತಾಗಿವೆ ಎಂದಿದ್ದಾರೆ.
ಈ ಬೆಳವಣಿಗೆಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಆಂತಕವನ್ನು ಮೂಡಿಸಿ, ಅಸುರಕ್ಷತೆಯ ಭಾವವನ್ನು ಉಂಟುಮಾಡಿದೆ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ನಿರ್ಮಾಣವಾಗಿರುವ ಗೊಂದಲ, ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ತಾವುಗಳು ಈ ಪ್ರಕರಣವನ್ನು ಸೂಕ್ತ ಹಾಗೂ ಪಾರದರ್ಶಕ ತನಿಖೆಗೆ ಒಳಪಡಿಸುವ ಮೂಲಕ ಜಯಶ್ರೀ ನಾಯಕ ಅವರ ಕುಟುಂಬದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.





