ಕಲಬುರಗಿ | ಅ.18ರಂದು ದಾಸ ಸಾಹಿತ್ಯ ಸಮ್ಮೇಳನ

ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದ ಆಶ್ರಯದಲ್ಲಿ ಅ.18 ರಂದು ನಗರದ ಕನ್ನಡ ಭವನದಲ್ಲಿ ಹಿರಿಯ ಪತ್ರಕರ್ತ-ಸಾಹಿತಿ ಡಾ.ಶ್ರೀನಿವಾಸ ಸಿರನುರಕರ್ ಅವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಕಲಬುರಗಿ ವಿಭಾಗ ಮೂರನೇ ದಾಸ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಕಗೊಂಡ ಉದ್ಯಮಿ ಕೃಷ್ಣಾಜೀ ಕುಲಕರ್ಣಿ ಅವರನ್ನು ಸತ್ಕರಿಸಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ನಂತರ ಮಾತನಾಡಿದ ಉದ್ಯಮಿ ಕೃಷ್ಣಾಜೀ ಕುಲಕರ್ಣಿ, ನಾಡು-ನುಡಿಗಾಗಿ ಪ್ರತಿಯೊಬ್ಬರೂ ನಿರಂತರ ಸೇವೆ ಮಾಡಬೇಕು. ಯಾವುದೇ ಸೇವೆ ಅಮೂಲ್ಯವಾದುದು. ಅದನ್ನು ನಿಸ್ವಾರ್ಥ ಮತ್ತು ನಿಷ್ಠೆಯಿಂದ ಮಾಡಿದರೆ ಸಾರ್ಥಕವಾಗುತ್ತದೆ. ಹಾಗೆಯೇ ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಕನ್ನಡ ನಿತ್ಯ-ಸತ್ಯವಾಗಬೇಕು ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕನ್ನಡಕ್ಕಾಗಿ ಶ್ರಮಿಸುತ್ತಿದೆ. ಕನ್ನಡದ ರಥ ಮುನ್ನಡೆಸಲು ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅವರ ತಂಡ ಸಮರ್ಥರಾಗಿದ್ದು, ಸಾಂಸ್ಕೃತಿಕ ಜಿಲ್ಲೆಯನ್ನಾಗಿಸುವ ಅವರ ಪ್ರಯತ್ನಕ್ಕೆ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಈ ಸಮಾಜದ ಎರಡು ಕಣ್ಣುಗಳಿದ್ದಂತೆ. ಇವೆರಡರ ಕಾಲಘಟ್ಟಗಳು ಬೇರೆ ಬೇರೆ ಯಾಗಿದ್ದರೂ, ಸಮಾಜ ಪರಿವರ್ತನೆಯ ಉದ್ದೇಶ ಒಂದೇ ಆಗಿದೆ. ಈ ನಿಟ್ಟಿನಲ್ಲಿ ದಾಸ ಸಾಹಿತ್ಯದಲ್ಲಿ ಅಡಗಿರುವ ಮೌಲ್ಯಗಳು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯ ಈ ಸಮ್ಮೇಳನ ಮಾಡುತ್ತಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಸಾಪ ದಕ್ಷಿಣ ವಲಯ ಅಧ್ಯಕ್ಷ ರವಿಕುಮಾರ ಶಹಾಪುರಕರ್ ಮಾತನಾಡಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ವೆಂಕುಬಾಯಿ ರಜಪೂತ, ಜಯಶ್ರೀ ಯಾದಗಿರಿ, ಮಲ್ಲಿನಾಥ ಸಂಗಶೆಟ್ಟಿ, ಮಂಜುನಾತ ಕಂಬಾಳಿಮಠ, ಎಂ.ಎನ್. ಸುಗಂಧಿ, ಶಿವಕುಮಾರ ಸಿ.ಎಚ್., ಮಹಾಲಿಂಗಯ್ಯ ಸ್ವಾಮಿ, ಅಮೃತಪ್ಪ ಅಣೂರ, ಸಂಗಪ್ಪ, ಗಂಗಾಧರ, ಸಿದ್ಧಲಿಂಗ ಬಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







