ಕಲಬುರಗಿ| ದೀನ್ ದಯಾಳ ಉಪಾಧ್ಯಾಯ ವಸತಿ ನಿಲಯದ ಕಾಮಗಾರಿ ಪೂರ್ಣಗೊಳಿಸುವಂತೆ ಡಿಸಿ ಬಿ.ಫೌಝಿಯಾ ತರನ್ನುಮ್ ಸೂಚನೆ

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಅವರಣದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಂಗಲು ಬಾಲಕ-ಬಾಲಕಿಯರಿಗೆ ತಲಾ 500 ಸಂಖ್ಯೆ ಸಾಮರ್ಥ್ಯದ ದೀನ್ ದಯಾಳ ಉಪಾಧ್ಯಾಯ ವಸತಿ ನಿಲಯ ಸಮುಚ್ಚಯ ಕಾಮಗಾರಿ ಮಂಗಳವಾರ ಪರಿಶೀಲಿಸಿದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು, ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಸಮಾಜ ಕಲ್ಯಾಣ, ಹಿಂದುಲಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯ ಸುಮಾರು 82 ಕೋಟಿ ರೂ. ಹಂಚಿಕೆ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ 1,000 ನಿಲಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ವಸತಿ ನಿಲಯ ಕೆಲಸ ಗುಣಮಟ್ಟದಿಂದ ಕೂಡಿರಬೇಕು. ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಬೇಗ ಮುಗಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದರು.
ಇದಕ್ಕೂ ಮುನ್ನ ಎಸ್.ಟಿ.ಬಿ.ಟಿ ಬಳಿ ಪ್ರಜ್ಞಾ ಆಂಗ್ಲ ಪ್ರೌಢ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ ನಡೆಯುತ್ತಿರುವ ಸಭಾಂಗಣ, ಡೈನಿಂಗ್ ಹಾಲ್, ಶಾಲಾ ಕೊಠಡಿ ಮುಂದುವರೆದ ಕಾಮಗಾರಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಸಭಾಂಗಣ ನಿರ್ಮಾಣ ಕಾರ್ಯ ಸಹ ಡ.ಸಿ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಸುಭಾಷ ಬಿರಾದಾರ, ಎ.ಇ.ಇ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.





