ಕಲಬುರಗಿ | ಪ್ರತಿಗ್ರಾಮ ಪಂಚಾಯತ್‌ನಿಂದ ಕನಿಷ್ಠ ಎರಡು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮವೆಂದು ಘೋಷಣೆ ಮಾಡಿ: ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ

ಕಲಬುರಗಿ : ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಯು ಕನಿಷ್ಠ ಎರಡು ತಂಬಾಕು ಮುಕ್ತ ಗ್ರಾಮಗಳನ್ನು ಘೋಷಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತಂಬಾಕು ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಚಿತ್ತಾಪುರ ತಾಲ್ಲೂಕಿನ ನಾಲ್ಕು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದೆ. ಅದೇ ಮಾದರಿಯಲ್ಲಿ ಇತರ ತಾಲ್ಲೂಕುಗಳೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಂದು ತಾಲ್ಲೂಕುಗಳಲ್ಲಿ ತಂಡಗಳನ್ನು ರಚಿಸಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಾಲಾ-ಕಾಲೇಜುಗಳಲ್ಲಿ ನಿಬಂಧ, ಭಾಷಣ, ಚಿತ್ರಕಲೆ, ರಂಗೋಲಿ ಮುಂತಾದ ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ನ.12 ರಂದು ಜಿಲ್ಲೆಯ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ದೇಶನ ನೀಡಿದ ಅವರು, ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸುವಂತೆ ಹೇಳಿದರು.
ಸಭೆಯಲ್ಲಿ ಅಧಿಕಾರಿಗಳು TOFEI ಆಪ್ ಬಳಕೆ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 130 ಶಾಲೆಗಳು ಈ ಆಪ್‌ನ್ನು ಬಳಸಿ ಪೂರ್ಣಗೊಳಿಸಿರುವುದಾಗಿ ತಿಳಿಸಿದರು.
ಕೋಟ್ಪಾ ಕಾಯ್ದೆಯಡಿ ಜುಲೈ ತಿಂಗಳಲ್ಲಿ ನಡೆದ ದಾಳಿಗಳ ವಿವರ ನೀಡಿದ ಸಲಹೆಗಾರ್ತಿ ಸುಜಾತಾ ಪಾಟೀಲ ಅವರು, ಜಿಲ್ಲೆಯಾದ್ಯಂತ 527 ಪ್ರಕರಣಗಳಲ್ಲಿ ಒಟ್ಟು 87,600 ರೂ. ದಂಡ ವಸೂಲಿಯಾಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ “ತಂಬಾಕು ಮುಕ್ತ ಯುವ ಅಭಿಯಾನ 3.0” ಕಾರ್ಯಯೋಜನೆಯ ಅನುಷ್ಠಾನ, ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳು ಮತ್ತು ಗ್ರಾಮಗಳ ನಿರ್ಮಾಣ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಜಿಲ್ಲಾ ಸಮೀಕ್ಷಣಾಧಿಕಾರಿ ರಾಕೇಶ್ ಕಾಂಬಳೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಸೈಯದ್ ಪಟೇಲ್ ಹಾಗೂ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.







