ಕಲಬುರಗಿ | ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ನಿಯೋಗ ಬೆಂಗಳೂರಿಗೆ ತೆರಳಲಿದೆ : ಸುರೇಶ್ ತಂಗಾ

ಕಲಬುರಗಿ : ರಾಜ್ಯ ಸರಕಾರ ಕೊಟ್ಟ ಭರವಸೆಯಂತೆ ಕೂಡಲೇ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ, ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರಿಶುದ್ಧ ಸಸ್ಯಾಹಾರಿ ವಸತಿ ನಿಲಯಗಳನ್ನು ಆರಂಭಿಸುವಂತೆ ಒತ್ತಾಯಿಸಿ ವಾರದಲ್ಲಿ ಜಿಲ್ಲಾ ಜೈನ್ ಯುವ ವೇದಿಕೆಯ ನೇತೃತ್ವದಲ್ಲಿ ಹಿರಿಯರು, ಮುಖಂಡರ ನಿಯೋಗವು ಬೆಂಗಳೂರಿಗೆ ತೆರಳಲಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸುರೇಶ್ ಎಸ್.ತಂಗಾ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಪ್ರಸ್ತುತ ಮಂಡಿಸಿದ ಬಜೆಟ್‍ನಲ್ಲಿ ಜೈನ ಬಾಂಧವರಿಗೆ ಯಾವುದೇ ಸಮಸ್ಯೆಗಳನ್ನು ಈಡೇರಿಸದೇ ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಜೈನ್ ಸಮಾಜದವರ ಬಹು ವರ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಮತ್ತು ನಾಡಿನ ಗ್ರಾಮೀಣ ಮತ್ತು ಬಡ, ಮಧ್ಯಮ ಕುಟುಂಬದ ಜೈನ ಸಮುದಾಯದ ಸರ್ವಾಂಗೀಣ ಪ್ರಗತಿಗಾಗಿ ಕರ್ನಾಟಕ ರಾಜ್ಯ ಜೈನ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಪ್ರಸ್ತುತ ಬಜೆಟ್‍ನಲ್ಲಿ ಘೋಷಿಸುವುದಾಗಿ ಸಚಿವರು ಭರವಸೆ ನೀಡಿದ್ದು, ಹುಸಿಯಾಗಿದೆ ಎಂದು ನಿರಾಶೆ ವ್ಯಕ್ತಪಡಿಸಿದರು.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಪ್ರಸ್ತುತ ನಾಲ್ಕು ಲಕ್ಷ ಕೋಟಿ ರೂ.ಗಳ ಬಜೆಟ್ ಗಾತ್ರವನ್ನು ಹೊಂದಿದ್ದರೂ ಸಹ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಬರುವ ಜೈನ್ ಸಮುದಾಯಕ್ಕೆ ನಿರೀಕ್ಷಿತ ಮಟ್ಟದ ಅನುದಾನ ನೀಡದೇ ಕಡಿಮೆ ಮಾಡಿರುವುದು ದು:ಖಕರ ಸಂಗತಿ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಬರುವ ಜೈನರು, ಸಿಖ್ಖರು, ಬೌದ್ಧ ಬಂಧುಗಳಿಗೆ ಕೇವಲ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಜೈನ್ ಸಮಾಜಕ್ಕೆ ತಲಾವಾರು ಹಂಚಿದರೆ ಕೇವಲ 33 ಕೋಟಿ ರೂ.ಗಳು ಬರುತ್ತದೆ. ನಾಡಿನಾದ್ಯಂತ ಇರುವ ಸುಮಾರು 20 ರಿಂದ 25 ಲಕ್ಷ ಜನಸಂಖ್ಯೆ ಹೊಂದಿರುವ ಜೈನರ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ರಾಜ್ಯದ ಉಪ ಮುಖ್ಯಮಂತ್ರಿಗಳೂ ಸೇರಿದಂತೆ ವಿವಿಧ ಸಚಿವರು, ಶಾಸಕರು ಜೈನ ಸಮುದಾಯದ ಕುರಿತು ಮಾತನಾಡುವಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದಡಿ ಸಮಾಜದ ಸರ್ವಾಂಗೀಣ ಪ್ರಗತಿಗೆ ನಿಗಮದ ಅಗತ್ಯವಿದ್ದು, ಹೀಗಾಗಿ ಪ್ರಸ್ತುತ ಬಜೆಟ್‍ನಲ್ಲಿ ಘೋಷಿಸಿ ನ್ಯಾಯ ಕಲ್ಪಿಸಲಾಗುವುದು ಎಂದು ಆಶ್ವಾಸನೆ ಕೊಟ್ಟರೂ ಸಹ ಬಜೆಟ್‍ನಲ್ಲಿ ಘೋಷಣೆ ಮಾಡಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯದಲ್ಲಿ ಸರ್ಕಾರ ಮೂರು ಸಸ್ಯಾಹಾರಿ ವಸತಿ ನಿಲಯಗಳನ್ನು ಕಲಬುರಗಿ, ಬೆಂಗಳೂರು, ಮೈಸೂರುಗಳಲ್ಲಿ ಆರಂಭಿಸಿದರೂ ಸಹ ಬೇಡಿಕೆ ಮತ್ತು ನಿರೀಕ್ಷೆಗೆ ತಕ್ಕಂತೆ ವಸತಿ ನಿಲಯಗಳಲ್ಲಿ ವ್ಯವಸ್ಥೆ ಇಲ್ಲದೇ ಇರುವುದರಿಂದ ವಸತಿ ನಿಲಯಗಳು ಹೆಸರಿಗೆ ಮಾತ್ರ ಇವೆ. ಈ ಕುರಿತು ಪರಿಶೀಲಿಸಿ ಕೂಡಲೇ ಜೈನ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಇದರಿಂದಾಗಿ ಜೈನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಗರ ಪ್ರದೇಶಗಳಿಗೆ ಬಂದು ಮಹಾನಗರಗಳಲ್ಲಿ ಖಾಸಗಿಯಾಗಿ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಬಡತನದಲ್ಲಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಆರ್ಥಿಕ ಮಟ್ಟ ಸುಭದ್ರವಾಗಿಲ್ಲ. ಹೀಗಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ರಾಜ್ಯದಲ್ಲಿ ಪ್ರಥಮ ಹಂತದಲ್ಲಿ ಐದು ಶುದ್ಧ ಸಸ್ಯಾಹಾರಿ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಕುಣಚಗಿ, ಶ್ರೇಣಿಕ ಪಾಟೀಲ್, ಧರಣೇಂದ್ರ ಸಂಗಮಿ, ರಮೇಶ್ ಬೆಳಕೇರಿ, ರಾಹುಲ್ ಕುಂಬಾರೆ ಮತ್ತಿತರರು ಉಪಸ್ಥಿತರಿದ್ದರು.







