ಕಲಬುರಗಿ | ಜಿಲ್ಲಾ ಮಹಿಳಾ ಕಾಂಗ್ರೆಸ್ ನಲ್ಲಿ ಭಿನ್ನಮತ ; ಅಧ್ಯಕ್ಷರ ಬದಲಾವಣೆಗೆ ಪಟ್ಟು

ಕಲಬುರಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಸಿಂಗೆ
ಕಲಬುರಗಿ : ನೂತನವಾಗಿ ನೇಮಕವಾಗಿರುವ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆಯ ವಿರುದ್ಧ ಸ್ವಪಕ್ಷದ ಮಹಿಳಾ ಕಾರ್ಯಕರ್ತರು ಭಿನ್ನಮತ ಸಭೆ ನಡೆಸಿ, ನೇಮಕಾತಿ ತಡೆಹಿಡಿಯಬೇಕೆಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಾಂಬಾ ಅವರ ಆದೇಶದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ರಾಜ್ಯ ಅಧ್ಯಕ್ಷರಾದ ಸೌಮ್ಯರೆಡ್ಡಿ ಅವರು ಕಲಬುರಗಿ ಸೇರಿ ರಾಜ್ಯದ ಐದು ಜಿಲ್ಲೆಗಳ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಕಲಬುರಗಿ ಜಿಲ್ಲೆಯ ಮಹಿಳಾ ಅಧ್ಯಕ್ಷರಾಗಿ ರೇಣುಕಾ ಸಿಂಗೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಭಿನ್ನಮತ ಶುರುವಾಗಿದೆ. ಕೆಲವು ದಿನಗಳ ಹಿಂದೆ ಮಹಿಳಾ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸ್ವಪಕ್ಷದ ಮಹಿಳಾ ಕಾರ್ಯಕರ್ತರು ಗೈರು ಆಗಿರುವುದು ಬೆಳಕಿಗೆ ಬಂದಿದೆ.
ರೇಣುಕಾ ಸಿಂಗೆ ಮಹಿಳೆಯರೊಂದಿಗೆ ಸಂಪರ್ಕ ಹೊಂದಿಲ್ಲ. ಪಕ್ಷ ಕಾರ್ಯಕರ್ತರ ವಿಶ್ವಾಸ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಪಕ್ಷ ಬಲಪಡಿಸುವುದಕ್ಕಾಗಿ ಸ್ವಪಕ್ಷದ ಮಹಿಳಾ ಕಾರ್ಯಕರ್ತರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಹಿರಿಯ ಮುಖಂಡರನ್ನು ಕಡೆಗಣಿಸಿ ಜಿಲ್ಲೆಯ ಕಾರ್ಯಕರ್ತರೊಂದಿಗೆ ಯಾವುದೇ ಚರ್ಚೆ, ಸಲಹೆ ಪಡೆಯದೆ ರೇಣುಕಾ ಸಿಂಗೆ ಅವರನ್ನು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಹಿಳಾ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು 'ವಾರ್ತಾ ಭಾರತಿ'ಗೆ ತಿಳಿಸಿದ್ದಾರೆ.
ಅಧ್ಯಕ್ಷರ ನೇಮಕವನ್ನು ಹಿಂಪಡೆಯಬೇಕೆಂದು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಕೃಷ್ಣ ದೊಡ್ಡಮನಿ ಅವರಿಗೆ ಕೆಲವು ಮಹಿಳಾ ಕಾರ್ಯಕರ್ತರು ಭೇಟಿ ನೀಡಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶುಕ್ರವಾರ ಕಲಬುರಗಿಯಲ್ಲಿ ಮಹಿಳಾ ಕಾರ್ಯಕರ್ತರು ಭೇಟಿ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದು, ನೇಮಕವನ್ನು ರದ್ದುಪಡಿಸಲು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾ ಸಿಂಗೆ ನಾಯಕತ್ವದ ವಿರುದ್ಧ ಭಿನ್ನಮತೀಯರ ಸಭೆಗಳು ನಡೆಯುತ್ತಿರುವುದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡರು, ಈ ಭಿನ್ನಮತಕ್ಕೆ ಶಮನ ಮಾಡಲು ಏನೆಲ್ಲಾ ಪ್ರಯತ್ನಿಸಲಿದ್ದಾರೆ ಎನ್ನುವುದು ಕಾದುನೋಡಬೇಕಿದೆ.







