ಕಲಬುರಗಿ | ಆದಿಬಣಜಿಗರು ಜಾತಿ ಲಿಂಗಾಯತ ಎಂದು ನಮೂದಿಸಿ: ಜಗನ್ನಾಥ ಶೇಗಜಿ

ಕಲಬುರಗಿ : ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಅ. 7ರವರೆಗೆ ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ, ಉಪಜಾತಿ ಕಾಲಂನಲ್ಲಿ ಆದಿ ಬಣಜಿಗ ಎಂದು ನಮೂದಿಸಬೇಕು ಎಂದು ಆದಿ ಬಣಜಿಗ ಸಮಾಜದ ಮಾಜಿ ಅಧ್ಯಕ್ಷ ಜಗನ್ನಾಥ ಶೇಗಜಿ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮಾಜದ ಜನರಲ್ಲಿ ಗೊಂದಲ ಉಂಟಾಗಿದ್ದು, ರಾಜ್ಯ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಆದ್ದರಿಂದ ಸಮೀಕ್ಷೆದಾರರು ಮನೆಗೆ ಬಂದಾಗ ಕುಟುಂಬ ಗುರುತಿನ ಚೀಟಿ, ಮತದಾರರ ಚೀಟಿ, ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಾಗಿ ದಾಖಲಾದರೆ ಸಮಾಜಕ್ಕೆ ಹೆಚ್ಚಿನ ಸೌಲಭ್ಯ ಲಭಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೀರಣ್ಣ ಮಂಗಾಣೆ, ವಿಶ್ವನಾಥ್ ಗೌನಹಳ್ಳಿ, ಗುಂಡರಾವ್ ಪದ್ಮಾಜಿ, ಗಿರಿರಾಜ್ ಯಳಿಮೇಲಿ, ಗುಪ್ತಲಿಂಗ, ರಾಜೇಂದ್ರ ಕರೆಕಲ್ ಮತ್ತಿತರರು ಉಪಸ್ಥಿತರಿದ್ದರು.





